Breaking News

ಸವದತ್ತಿ ಯಲ್ಲಮ್ಮ ದೇವಿಗೆ ಹರಿದು ಬಂತು ಕೋಟಿ ಕೋಟಿ ಕಾಣಿಕೆ

Spread the love

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಯಲ್ಲಮ್ಮದೇವಿ ಮಂದಿರದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ 3.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತಿ ಬಾರಿ ಎಣಿಕೆ ಮಾಡಿದಾಗಲೂ 1ರಿಂದ 1.5 ಕೋಟಿ ರೂ.ವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ಮೂರೂವರೆ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ಹೊಸ ದಾಖಲೆಯಾಗಿದೆ.

ಸವದತ್ತಿ ಯಲ್ಲಮ್ಮ ದೇವಿ, ಯಲ್ಲಮ್ಮ ದೇವಿ ಹುಂಡಿ ಕಾಣಿಕೆ, Yallamma temple hundi, savadatti

2024ರ ಡಿಸೆಂಬರ್ 14ರಿಂದ 2025ರ ಮಾರ್ಚ್ 12ರವರೆಗೆ(89 ದಿನ) ಏಳುಕೊಳ್ಳದ ತಾಯಿ ಎಂದೇ ಖ್ಯಾತಿ ಪಡೆದಿರುವ ಯಲ್ಲಮ್ಮದೇವಿ ದರ್ಶನಕ್ಕೆ ಬಂದ ಭಕ್ತರು ಯಲ್ಲಮ್ಮ ದೇವಸ್ಥಾನ ಮತ್ತು ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ 3.40 ಕೋಟಿ ರೂ. ನಗದು, 20.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6.39 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣವನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.

ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂದಿ, ಮುಜರಾಯಿ ಇಲಾಖೆ ಅಧಿಕಾರಿಗಳು, ಸವದತ್ತಿ ಕಚೇರಿ ಅಧಿಕಾರಿಗಳು, ಸವದತ್ತಿ ಪೊಲೀಸ್ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ನೆರವೇರಿಸಲಾಯಿತು.

ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಸಮಯದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಭವ್ಯ ಜಾತ್ರೆ ಜರುಗುತ್ತದೆ. ಈ ವೇಳೆ ಭಕ್ತರ ದಂಡೇ ಗುಡ್ಡಕ್ಕೆ ಹರಿದು ಬರುತ್ತದೆ. ಅದರ ಜೊತೆಗೆ ಕಾಣಿಕೆಯೂ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದರೆ, ಕಳೆದ ವರ್ಷ ಬರಗಾಲವಿದ್ದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೇ ಕಾಣಿಕೆಯೂ ಕಡಿಮೆ ಬಂದಿತ್ತು.

ಈ ಬಾರಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬಂದಿದ್ದು, ರೈತರು ಸೇರಿ ಎಲ್ಲ ವರ್ಗದ ಜನರು ಸಂತಸದಲ್ಲಿದ್ದಾರೆ. ಆದ್ದರಿಂದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ವೇಳೆ ನಿರೀಕ್ಷೆಗೂ ಮೀರಿ ಭಕ್ತ ಸಾಗರವೇ ದೇವಿಯ ದರ್ಶನಕ್ಕೆ ಬಂದಿತ್ತು. ಹಾಗಾಗಿ, ಕಾಣಿಕೆ ಸಂಗ್ರಹವೂ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ವಿದೇಶಿ ಕರೆನ್ಸಿ ಪತ್ತೆ: ಭಕ್ತರು ದೇವಸ್ಥಾನದಲ್ಲಿನ ಹುಂಡಿಗೆ ತಮ್ಮ ಆರ್ಥಿಕ ಶಕ್ತಿಯಾನುಸಾರ ಹಣ, ಒಡವೆ ಹಾಕಿ ಭಕ್ತಿ ಮೆರೆಯುವುದು ಸಾಮಾನ್ಯ. ಇನ್ನೂ‌ ವಿಶೇಷವೆಂದರೆ ಹುಂಡಿಯಲ್ಲಿ ಭಾರತ ಮಾತ್ರವಲ್ಲದೆ ಅಮೆರಿಕ, ನೆದರ್ಲೆಂಡ್ಸ್ ಸೇರಿ ಬೇರೆ ದೇಶಗಳ ಕರೆನ್ಸಿಗಳೂ ಸಿಕ್ಕಿವೆ.

ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಮಾಹಿತಿ ನೀಡಿದ್ದು, “ದೇವಸ್ಥಾನಗಳಲ್ಲಿರುವ ಹುಂಡಿಯ ಹಣವನ್ನು ದೇವಸ್ಥಾನದ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಆ ಹಣವನ್ನು ದೇವಸ್ಥಾನದ ಅಭಿವೃದ್ಧಿ ಕೆಲಸಕ್ಕೆ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಬಳಕೆ‌‌ ಮಾಡಲಾಗುವುದು” ಎಂದರು.

“ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದೇವೆ. ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿ ಭಕ್ತರಿಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲಾಗುವುದು. ಜೊತೆಗೆ ದೇವಸ್ಥಾನದ ಆದಾಯ ಕೂಡ ಹೆಚ್ಚಿಸಲಾಗುವುದು” ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದ್ದಾರೆ.

ಹುಂಡಿ ಎಣಿಕೆ ವೇಳೆ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮುಜರಾಯಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ದೇವಸ್ಥಾನ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಡಿ.ಆರ್.ಚವ್ಹಾಣ, ಅನ್ನಪೂರ್ಣಾ ಬ್ಯಾಹಟ್ಟಿ, ಎಎಸ್‍ಐ ಬಿ.ಆರ್.ಸಣ್ಣಮಳಗೆ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ್ಯ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್.ಸವದತ್ತಿ, ರಾಜು ಬೆಳವಡಿ, ಪ್ರಭು ಹಂಜಗಿ, ಡಿ.ಡಿ.ನಾಗನಗೌಡರ, ಯೋಗೇಶ ಶೀರಾಳೆ, ವ್ಹಿ.ಆರ್.ನೀಲಗುಂದ, ಮಲ್ಲಯ್ಯ ತೋರಗಲ್ಲಮಠ ಮತ್ತು ದೇವಸ್ಥಾನ ಸಿಬ್ಬಂದಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಿದರು.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿ ಒಂದೂವರೆ ವರ್ಷವಾಯಿತು, ಬಿಜೆಪಿಯವರು ನಿದ್ರಿಸುತ್ತಿದ್ದರೇ? ಲಕ್ಷ್ಮಿ ಹೆಬ್ಬಾಳ್ಕರ್

Spread the loveಬೆಂಗಳೂರು, ಮಾರ್ಚ್​ 12 : ಸದನದಲ್ಲಿ ಹಲವಾರು ಚರ್ಚೆಗಳಾಗಬೇಕಿದೆ, ಅನುದಾನ ಹಂಚಿಕೆಯಲ್ಲಿ (grants distribution) ಯಾವುದಾದರೂ ಪ್ರಾಂತ್ಯಕ್ಕೆ ಅನ್ಯಾಯವಾಗಿದೆಯಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ