ಗಂಗಾವತಿ(ಕೊಪ್ಪಳ): ಚಲಿಸುತ್ತಿದ್ದ ಕೆಕೆಆರ್ಟಿಸಿ ಬಸ್ಸಿನ ಮುಂಭಾಗದ ಟೈರ್ ಸ್ಫೋಟಗೊಂಡ ಘಟನೆ ದಾಸನಾಳದ ಹೊರವಲಯದಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ಸನ್ನು ಚಾಲಕ ಹತೋಟಿಗೆ ತಂದು 20 ಪ್ರಯಾಣಿಕರ ಜೀವ ಕಾಪಾಡಿದ್ದಾರೆ.
ಗಂಗಾವತಿ ಸಾರಿಗೆ ಘಟಕಕ್ಕೆ ಸೇರಿದ ಬಸ್ ಕೊಪ್ಪಳದಿಂದ ಗಂಗಾವತಿಯತ್ತ ಸಂಚರಿಸುತ್ತಿದ್ದಾಗ ಮುಂದಿನ ಚಕ್ರ ಸ್ಫೋಟಗೊಂಡಿದೆ. ಚಾಲಕ ಮಂಜುನಾಥ ಗಾಣಿಗೇರ ತಕ್ಷಣ ಬಸ್ಸನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಬಸ್ ಸುಮಾರು 100 ಮೀಟರ್ಗೂ ಹೆಚ್ಚು ತೆವಳಿಕೊಂಡು ಹೋಗಿ ನಿಂತಿದೆ.
“ಟೈರ್ ಸ್ಫೋಟಗೊಂಡ ಸಂದರ್ಭದಲ್ಲಿ ಬಸ್ನ ಹಿಂದೆ ಅಥವಾ ಎದುರು ಯಾವುದಾದರೂ ವಾಹನ ಬಂದಿದ್ದರೆ ಊಹಿಸಲಾಗದ ಅಪಾಯ ಉಂಟಾಗುತ್ತಿತ್ತು” ಎಂದು ಪ್ರಯಾಣಿಕರೊಬ್ಬರು ಹೇಳಿದರು.
ಪಾರಾದ ಸಚಿವ, ಸಂಸದ: ಈ ಘಟನೆಗೆ ಕೆಲವೇ ನಿಮಿಷ ಮುನ್ನ ಇದೇ ರಸ್ತೆಯಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ತೆರಳಿದ್ದರು.
Laxmi News 24×7