ಬೆಳಗಾವಿ: ಗಡಿಭಾಗ ಬೆಳಗಾವಿಯಲ್ಲಿ ಜಿಲ್ಲಾ ಹಾಗೂ ತಾಲೂಕಾ ಪಂಚಾಯತ ಚುನಾವಣೆಯ ವೇಳೆ ಮರಾಠಿ ಭಾಷೆಯಲ್ಲಿಯೂ ಕಾಗದಪತ್ರಗಳನ್ನು ನೀಡಬೇಕು. ಶಿವಜಯಂತಿಯಂದು ಸರ್ಕಾರಿ ರಜೆ ಘೋಷಿಸಬೇಕೆಂದು ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಕೇಂದ್ರದ ಅಲ್ಪಸಂಖ್ಯಾತ ಆಯೋಗದ ಉಪಾಯುಕ್ತರಿಗೆ ಮನವಿಯನ್ನು ಸಲ್ಲಿಸಿದೆ.
ಕೇಂದ್ರದ ಅಲ್ಪಸಂಖ್ಯಾತ ಆಯೋಗದ ಉಪಾಯುಕ್ತರಾದ ಎಸ್.ಶಿವಕುಮಾರ್ ಅವರನ್ನು ಭೇಟಿಯಾದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಯೋಗವನ್ನು ಗಡಿಭಾಗ ಬೆಳಗಾವಿಯಲ್ಲಿ ಶೇ. 15 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕರಿದ್ದು, ಅಲ್ಪಸಂಖ್ಯಾತ ಕಾನೂನಿನ ಪ್ರಕಾರ ಬೆಳಗಾವಿಯಲ್ಲಿ ಮರಾಠಿ ಭಾಷೆಯಲ್ಲಿ ಪರಿಪತ್ರಗಳನ್ನು ನೀಡಬೇಕು.
ಗೋವಾ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯದಿಂದ ಬರುವ ಪ್ರವಾಸಿಗರಿಗೆ ತಿಳಿಯುವಂತೆ ಕನ್ನಡದ ಜೊತೆಗೆ ಮರಾಠಿ ಭಾಷೆಯಲ್ಲೂ ಅಂಗಡಿಯ ಫಲಕಗಳನ್ನು ಮತ್ತು ಬಸ್ಸಿನ ಬೋರ್ಡಿಗಳನ್ನು ಅಳವಡಿಸಬೇಕು. ಅಲ್ಲದೇ ಬೆಳಗಾವಿಯಲ್ಲಿದ್ದ ಕೇಂದ್ರದ ಅಲ್ಪಸಂಖ್ಯಾತರ ಆಯೋಗದ ಕಾರ್ಯಾಲಯವನ್ನು ಪುನರಾರಂಭಿಸಬೇಕು ಸೇರಿದಂತೆ ಇನ್ನುಳಿದ ಬೇಡಿಕೆಗಳನ್ನು ಪೂರೈಸುವಂತೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಯುವಾ ಸಮಿತಿಯ ಅಧ್ಯಕ್ಷರಾದ ಶುಭಂ ಶೇಳಕೆ, ಖಾನಾಪೂರ ಸಮಿತಿಯ ಅಧ್ಯಕ್ಷ ಧನಂಜಯ ಪಾಟೀಲ್, ಕಾರ್ಯದರ್ಶಿ ಮನೋಹರ ಹುಂದ್ರೆ, ಖಜಾಂಚಿ ಮತ್ತು ನಗರಸೇವಕರಾದ ಶಿವಾಜೀರಾವ್ ಮಂಡೋಳ್ಕರ್, ಉಪಾಧ್ಯಕ್ಷರಾದ ಪ್ರವೀಣ ರೇಡೆಕರ, ವಿಜಯ ಜಾಧವ್, ಸಚೀನ್ ದಳವಿ, ಚಂದೂ ಪಾಟೀಲ್, ಅಶೋಕ ಘಗವೆ, ರಣಜೀತ್ ಹಾವಳನ್ನಾಚೆ, ಇಂದ್ರಜೀತ್ ಧಾಮಣೇಕರ, ರಾಜು ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.