ಬೆಂಗಳೂರು: ಪತಿಯ ಅನೈತಿಕ ಸಂಬಂಧದಿಂದ ಜೀವನದಲ್ಲಿ ಬೇಸತ್ತ 34 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ಕು ವರ್ಷದ ಮಗಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಬೆಂಗಳೂರಿನ ರಾಮಯ್ಯ ಲೇಔಟ್ ನಡೆದಿದೆ.
ಪಾವಗಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರುತಿ, ಮೊದಲು ತಮ್ಮ ಮಗಳು ರೋಶಿನಿಯನ್ನು ದುಪ್ಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಸಂದ್ರದ ರಾಮಯ್ಯ ಲೇಔಟ್‌ನಲ್ಲಿ ಭಾನುವಾರ ಸಂಜೆ ಶ್ರುತಿಯ ಪತಿ ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ.
ಸ್ಥಳದಿಂದ ವಶಪಡಿಸಿಕೊಳ್ಳಲಾದ ಆತ್ಮಹತ್ಯೆ ಪತ್ರದಲ್ಲಿ ಆಕೆಯ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಮತ್ತು ಅವರಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಬರೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶೃತಿ 2014ರಲ್ಲಿ ಗೋಪಾಲಕೃಷ್ಣ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ನಂತರ, ಮಹಿಳೆಯ ಪತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.