ಬೆಳಗಾವಿ: ರಸ್ತೆಯ ಟಾರು ಕಿತ್ತು ಹೋಗಿ, ಧೂಳಿನ ಸಾಮ್ರಾಜ್ಯ ನಿರ್ಮಾಣವಾಗಿದ್ದು, ಬೆಳಗಾವಿಯ ಪ್ರಧಾನ ಅಂಚೆ ಕಾರ್ಯಾಲಯ ಪ್ರದೇಶದ ಜನರು ರೋಸಿ ಹೋಗಿದ್ದಾರೆ. ರಸ್ತೆ ಅಭಿವೃದ್ಧಿ ಕಾಣದೇ ಇಲ್ಲಿನ ಜನರು ಪರಿತಪಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ರಿಪೋರ್ಟ್
ಬೆಳಗಾವಿಯ ದಂಡು ಮಂಡಳಿಯ ಅಸ್ತಿತ್ವಕ್ಕೆ ಬರುವ ಪ್ರಧಾನ ಅಂಚೆ ಕಾರ್ಯಾಲಯದ ಪ್ರದೇಶದಲ್ಲಿರುವ ರಸ್ತೆಗೆ ದುರಾವಸ್ಥೆ ಪ್ರಾಪ್ತವಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಮಳೆಗಾಲದ ಮೊದಲೂ ಮಣ್ಣು ಹಾಕಲಾಗಿತ್ತು. ಮಳೆಗಾಲದ ನಂತರ ರಸ್ತೆ ನಿರ್ಮಿಸುವುದಾಗಿ ಹೇಳಲಾಗಿತ್ತು. ಆದರೇ ಇಲ್ಲಿಯ ವರೆಗೂ ರಸ್ತೆ ಅಭಿವೃದ್ಧಿ ಪಡಿಸದ ಹಿನ್ನೆಲೆ ಸ್ಥಳದಲ್ಲಿ ಧೂಳಿನ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಸರಿಯಾದ ರಸ್ತೆಯಿಲ್ಲದೇ ಒಂದೆಡೇ ತೊಂದರೆಯುಂಟಾದರೇ, ಇನ್ನೊಂದೆಡೆ ಧೂಳಿನ ಸಾಮ್ರಾಜ್ಯಕ್ಕೆ ಜನರು ಸೋತು ಹೋಗಿದ್ದಾರೆ.
ಈ ಇಲ್ಲಿರುವ ಮನೆಗಳು ಮತ್ತು ಅಂಗಡಿಗಳಲ್ಲಿ ಧೂಳು ಹೊಕ್ಕುತ್ತಿದ್ದು, ಪ್ರತಿದಿನವು ಹಲವಾರು ಬಾರಿ ಸ್ವಚ್ಛಗೊಳಿಸಿ ಜನರು ರೋಸಿ ಹೋಗಿದ್ದಾರೆ. ಇಲ್ಲಿರುವ ತಿನಿಸಿನ ಅಂಗಡಿಗಳಲ್ಲಿ ಧೂಳು ಬರುತ್ತಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಧೂಳಿನಿಂದಾಗಿ ಗ್ರಾಹಕರು ಕಿರಿಕಿರಿ ಮಾಡುತ್ತಿದ್ದಾರೆನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.ಇನ್ನು ಕಳೆದ 2-3 ತಿಂಗಳಿನಿಂದ ಈ ಸಮಸ್ಯೆಯುಂಟಾಗಿದೆ. ಆದರೇ ಸಂಬಂಧಿಸಿದ ದಂಡು ಮಂಡಳಿ, ರಸ್ತೆಯನ್ನು ನಿರ್ಮಿಸಿ ಸಮಸ್ಯೆಯನ್ನು ಪರಿಹರಿಸಲೂ ಮುಂದಾಗುತ್ತಿಲ್ಲ. ಇದರಿಂದಾಗಿ ಇಲ್ಲಿರುವ ವ್ಯಾಪಾರಿಗಳಿಗೂ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುವಂತಾಗಿದೆ. ಯಾವಾಗ ಈ ಧೂಳಿನ ಸಾಮ್ರಾಜ್ಯದಿಂದ ಮುಕ್ತಿ ಸಿಗುತ್ತದೆ? ಎಂದು ಪ್ರಶ್ನಿಸುತ್ತಿದ್ದಾರೆ.ಇನ್ನಾದರೂ ದಂಡು ಮಂಡಳಿಯೂ ಎಚ್ಚೆತ್ತುಕೊಂಡು ಶೀಘ್ರದಲ್ಲೇ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹ ಕೇಳಿ ಬರುತ್ತಿದೆ.