ಬೆಂಗಳೂರಿನ ಕೈಯಲ್ಲಿ ಭಾರತದ ಭವಿಷ್ಯ, ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಮುಖ ರಾಜ್ಯ: ರಾಜನಾಥ್ ಸಿಂಗ್
ಬೆಂಗಳೂರು: ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಅತ್ಯುತ್ತಮ ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿ ಮಾಡಿಸಿದ ರಾಜ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ’ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟಪ್ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದರು.
ಸಮಾವೇಶದಲ್ಲಿ ಜಗತ್ತಿನ ನಾನಾ ಭಾಗಗಳ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ . ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Laxmi News 24×7