ಬೆಂಗಳೂರು: ಕೂತುಹಲಕಾರಿ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಭೂ ಸುಧಾರಣಾ ಕಾಯ್ದೆ ವಿಧಾನಪರಿಷತ್ ನಲ್ಲೂ ಅಂಗೀಕಾರಗೊಂಡಿದೆ. ಕಳೆದ ಎರಡು ದಿನಗಳಿಂದ ಸುಧೀರ್ಘ ಚರ್ಚೆ ನಡೆದು ಇಂದು ಸಂಜೆ ವಿಧೇಯಕವನ್ನು ಮತಕ್ಕೆ ಹಾಕಿದಾಗ ಬಿಜೆಪಿ ಹಾಗೂ ಜೆಡಿಎಸ್ ನ 37 ಮಂದಿ ಪರವಾಗಿ ಮತ ಚಲಾಯಿಸಿದರು.
ಕಾಂಗ್ರೆಸ್ ನ ಸದಸ್ಯರು, ಜೆಡಿಎಸ್ ನ ಮರಿತಿಬ್ಬೇಗೌಡ ಸೇರಿದಂತೆ ಒಟ್ಟು 21 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಕೊನೆಗೆ ವಿಧೇಯಕ ಅಂಗೀಕಾರಗೊಂಡಿದೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಘೋಷಿಸಿದರು.
ಈ ಮೂಲಕ ಕಳೆದ ಅಧಿವೇಶನದಲ್ಲಿ ಕೂದಳೆಯ ಅಂತರದಲ್ಲಿ ಹಿನ್ನೆಡೆ ಅನುಭವಿಸಿದ್ದ ಸರ್ಕಾರ ಈ ಬಾರಿ ಹಠಕ್ಕೆ ಬಿದ್ದು ವಿಧೇಯಕವನ್ನು ಪಾಸು ಮಾಡಿಸಿಕೊಂಡಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಕಳೆದೆರಡು ದಿನಗಳಿಂದ ವಿಧಾನ ಪರಿಷತ್ ನಲ್ಲೇ ಕುಳಿತು ಚರ್ಚೆಗೆ ಉತ್ತರ ನೀಡಿದರು.
ಪ್ರತಿ ಬಾರಿ ಪ್ರತಿಪಕ್ಷಗಳು ಕೆಣಕಿ ಮಾತನಾಡಿದಾಗಲೂ ಪ್ರಚೋಚನೆಗೆ ಒಳಗಾಗದೆ ತಾಳ್ಮೆಯಿಂದ ಉಳಿದು ಕೊನೆಗೆ ವಿಧೇಯಕಕ್ಕೆ ಅಂಗೀಕಾರ ಪಡೆದಿದ್ದಾರೆ. ಈ ಮೂಲಕ ತೀವ್ರ ವಿವಾದಕ್ಕೆ ಒಳಗಾಗಿದ್ದ ಭೂ ಸುಧಾರಣಾ ಕಾಯ್ದೆ ಅಂಗೀಕಾರಗೊಂಡಿದೆ.