ಬೆಂಗಳೂರು, : ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರ್ಸಸ್ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಅಂತಿಮ ಹಂತದ ಕದನ ದಿಲ್ಲಿಗೆ ಶಿಫ್ಟ್ ಆಗಿದೆ. ಈಗಾಗಲೇ ಬೆಂಗಳೂರಿನಿಂದ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತು ಎನ್.ಆರ್ ಸಂತೋಷ್ ದೆಹಲಿಗೆ ತೆರಳಿದ್ದು, ಇನ್ನು ನಾಳೆ(ಫೆಬ್ರವರಿ 04) ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ ಹರೀಶ್ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ದೆಹಲಿಗೆ ತೆರಳಲಿದ್ದಾರೆ. ಇದಲ್ಲದೇ ಯತ್ನಾಳ್ ಟೀಮ್ ಜೊತೆ ಇನ್ನೂ ಕೆಲವರು ವಿಮಾನ ಏರಲಿದ್ದಾರೆ. ಇದರೊಂದಿಗೆ ಯತ್ನಾಳ್ ಬಣ ಮತ್ತಷ್ಟು ದೊಡ್ಡದಾಗಿದೆ.
ಯತ್ನಾಳ್ ಬಣದ ಬೇಡಿಕೆಗಳೇನು..?
ಎರಡ್ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿರುವ ಯತ್ನಾಳ್ ಬಣ, ರಾಜ್ಯಾದ್ಯಕ್ಷ ಚುನಾವಣೆ ನಡೆಯಬೇಕು ಎಂದು ಒತ್ತಡ ಹಾಕುವ ಸಾಧ್ಯತೆ ಇದೆ. ಇದೇ ವಿಚಾರ ಇಟ್ಕೊಂಡು ಯತ್ನಾಳ್ ಟೀಮ್ ದೆಹಲಿಗೆ ತೆರಳಿರುವುದಕ್ಕೆ ಕಾರಣವೂ ಇದೆ. ಅದೇನಂದ್ರೆ, ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಈಗಲೂ ಗೊಂದಲವಿದೆ. ಚುನಾವಣಾ ಮೇಲುಸ್ತುವಾರಿಯಾಗಿರುವ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಬಜೆಟ್ ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ. ಚೌಹಾಣ್ ಯಾವಾಗ ರಾಜ್ಯಕ್ಕೆ ಬರುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಇದೇ ವೇಳೆಯಲ್ಲಿ ದೆಹಲಿಗೆ ಹೋಗಿ ಒತ್ತಡ ಹಾಕಲು ಯತ್ನಾಳ್ ಬಣ ಮುಂದಾಗಿದೆ. ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನ ರದ್ದು ಮಾಡಬೇಕೆಂಬ ಒತ್ತಡವನ್ನೂ ಮಾಡುವ ಸಾಧ್ಯತೆ ಇದೆ. ವರಿಷ್ಠರನ್ನಷ್ಟೇ ಅಲ್ಲ, ಸಂಸದರನ್ನ ಭೇಟಿ ಮಾಡಿ ತಮ್ಮ ತಂಡದ ಬಲವನ್ನ ವೃದ್ಧಿ ಮಾಡಿಕೊಳ್ಳವ ಪ್ರಯತ್ನವನ್ನೂ ಮಾಡಲಿದ್ದಾರೆ.
Laxmi News 24×7