ದಾಖಲೆ ಅಂದರೆ ದಳಪತಿ.. ದಳಪತಿ ಅಂದರೆ ದಾಖಲೆ ಅನ್ನೋದು ಪ್ರತಿ ಸಿನಿಮಾದಲ್ಲಿಯೂ ಸಾಬೀತು ಆಗುತ್ತಲೆ ಇದೆ. ಅದರಲೂ ರಾಜಕೀಯ ಅಖಾಡಕ್ಕೆ ಇಳಿದಿರುವ ವಿಜಯ್ ವೃತ್ತಿಜೀವನದ ಕೊನೆ ಸಿನಿಮಾ ಜನನಾಯಗನ್ ಪ್ರಭೆ ಎಲ್ಲೆಡೆ ಹಬ್ಬಿದೆ. ಬಿಡುಗಡೆಗೂ ಮೊದಲೇ ಈ ಚಿತ್ರ ಹಲವು ರೆಕಾರ್ಡ್ ಬರೆಯುತ್ತಿದೆ.
ವಿಜಯ್ರ ಕೊನೆಯ ಚಿತ್ರ ಇದಾಗಿರುವ ಕಾರಣ ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅತಿ ದೊಡ್ಡ ಬಜೆಟ್ ನಲ್ಲಿ ಜನನಾಯಗನ್ ಸಿನಿಮಾವನ್ನು ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೆ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ. ಫಸ್ಟ್ ಪೋಸ್ಟರ್ ನಲ್ಲಿ ಕಿಚ್ಚು ಹಚ್ಚಿರುವ ಜನನಾಯಗನ್ ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಜನನಾಯಗನ್ ಸಿನಿಮಾದ ಓವರ್ ಸೀಸ್ ಹಕ್ಕನ್ನು PHF film ತನ್ನ ತೆಕ್ಕೆಗೆ ಹಾಕಿಕೊಂಡಿದೆ. ದೊಡ್ಡ ಮೊತ್ತಕ್ಕೆ ವಿತರಣೆ ಹಕ್ಕನ್ನು ಖರೀದಿ ಮಾಡಿದೆ. ತಮಿಳಿನ ಖ್ಯಾತ ನಿರ್ದೇಶಕ ಹೆಚ್ ವಿನೋದ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರಕ್ಕೆ ಅನಿರುದ್ಧ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯನ್ ಸೂರ್ಯನ್ ಸಿನಿಮಾಟೊಗ್ರಫಿ, ಅನಲ್ ಅರಸು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಜನನಾಯಗನ್’ ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಕೆವಿಎನ್ನ ವೆಂಕಟ್ ಕೆ ನಾರಾಯಣ್ ಹೂಡುತ್ತಿದ್ದು, ಭಾರಿ ದೊಡ್ಡ ಪ್ರಮಾಣದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದ್ಧೂರಿ ಸೆಟ್ಗಳು, ಅದ್ಧೂರಿ ವಿಎಫ್ಎಕ್ಸ್ ಮಾತ್ರವೇ ಅಲ್ಲದೆ ಭಾರಿ ಸಂಖ್ಯೆಯ ಜನರನ್ನು ಸೇರಿಸಿ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಗಣೇಶ್ ನಟನೆಯ ‘ಸಖತ್’ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ವೆಂಕಟ್ ಅವರು ಆ ನಂತರ ‘ಬೈ ಟು ಲವ್’ ನಿರ್ಮಾಣ ಮಾಡಿ ಹಿಟ್ ನೀಡಿದರು. ಇದೀಗ ಕೆವಿಎನ್ ಪ್ರೊಡಕ್ಷನ್ನಿಂದ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಧ್ರುವ ಸರ್ಜಾ ನಟಿಸಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’, ಯಶ್ ನಟಿಸಿ, ಗೀತು ಮೋಹನ್ದಾಸ್ ನಿರ್ದೇಶನ ಮಾಡಿರುವ ಇಡೀ ಭಾರತವೇ ಎದುರು ನೋಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಅನ್ನೂ ಸಹ ನಿರ್ಮಾಣ ಮಾಡುತ್ತಿರುವುದು ಕೆವಿಎನ್ನ ವೆಂಟಕ್ ಅವರೇ. ಇದರ ಜೊತೆಗೆ ಮಲಯಾಳಂ ಸಿನಿಮಾ ಒಂದಕ್ಕೂ ಬಂಡವಾಳ ಹೂಡಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಜೊತೆಯಲ್ಲಿ ನಿರೀಕ್ಷೆ ಜೊತೆಗೆ ಕುತೂಹಲ ಹುಟ್ಟಿಸಿರುವ ಜನನಾಯಗನ್ ಮೂಲಕ ಕೆವಿಎನ್ ಹೊಸ ಕ್ರಾಂತಿ ಬರೆಯಲು ಹೊರಟಿದೆ. ಕನ್ನಡದ ನಿರ್ಮಾಣ ಸಂಸ್ಥೆ ಕಾಲಿವುಡ್ ಸೂಪರ್ ಸ್ಟಾರ್ ಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ವಿಶೇಷ. ಅದು ವಿಜಯ್ ಕೊನೆ ಸಿನಿಮಾ ಅನ್ನೋದು ಸವಾಲೇ. ಬಹಳ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರಲು ಕೆವಿಎನ್ ಸಾರಥಿ ವೆಂಕಟ್ ಕೊನಂಕಿ ಚಿತ್ರತಂಡಕ್ಕೆ ಸಾಥ್ ಕೊಡುತ್ತಿದ್ದಾರೆ.