ಬೆಂಗಳೂರು: ಅರ್ಜುನ್ ಜನ್ಯ, ಹರಿಕೃಷ್ಣ ನಂತರ ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಚರಣ್ ರಾಜ್. ಚರಣ್ ಸಂಗೀತ ನಿರ್ದೇಶಕನಕ್ಕೆ ಪ್ರತ್ಯೇಕ ಪ್ರೇಕ್ಷಕ ವರ್ಗ ಹುಟ್ಟುಕೊಂಡಿದೆ. ‘ಟಗರು’, ‘ಸಲಗ’, ‘ಸಪ್ತ ಸಾಗರದಾಚೆ ಎಲ್ಲೋ’ ಭೀಮ, ಬ್ಯಾಡ್ ಮ್ಯಾನರ್ಸ್, ಹೆಡ್ ಬುಷ್, ಜೇಮ್ಸ್ ಮುಂತಾದ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡ ಚಿತ್ರರಂಗದ ಪ್ರತಿಭಾವಂತ ಗೀತ ಸಂಯೋಜಕ ಚರಣ್ ರಾಜ್ ಈಗ ಪರಾಕ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡು ಜಾನರ್ ಸಿನಿಮಾಗಳಿಗೆ ಅದ್ಭುತ ಸಂಗೀತ ಮೆರುಗು ನೀಡುವ ಈ ಮ್ಯೂಸಿಕ್ ಮಾಂತ್ರಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಂದಿನ ಸಿನಿಮಾ ಪರಾಕ್ ಗೆ ಸಂಗೀತ ಬಲ ನೀಡುತ್ತಿದ್ದಾರೆ.
ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಪರಾಕ್ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಶ್ರೀಮುರಳಿ ಈ ಹಿಂದೆನೂ ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಈಗಲೂ ಅದನ್ನ ಫಾಲೋ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗುತ್ತದೆ.
ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ.ತಾರಾಬಳಗವೂ ದೊಡ್ಡದೇ ಇರಲಿದೆ. ಮಾರ್ಚ್ ನಿಂದ ಪರಾಕ್ ಶೂಟಿಂಗ್ ಶುರುವಾಗಲಿದೆ. ಸದ್ಯ ವಿಭಿನ್ನ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿರುವ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಪರಾಕ್ ಸಿನಿಮಾ ತಂಡ ಸೇರಿರುವುದು ನಿರೀಕ್ಷೆ ಹೆಚ್ಚಿಸಿದೆ.