ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಇರುವ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ಆರು ತಿಂಗಳ ಗಡುವು ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ತಕರಾರು ಪ್ರಕರಣಗಳನ್ನು ತಹಶೀಲ್ದಾರ್ ನ್ಯಾಯಾಲಯಗಳು 90 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂಬ ನಿಯಮವಿದೆ.
ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವಧಿ ಮೀರಿದ 10,774 ಪ್ರಕರಣಗಳಿದ್ದವು. ಪ್ರಸ್ತುತ ಈ ಸಂಖ್ಯೆಯನ್ನು 369ಕ್ಕೆ ಇಳಿಸಲಾಗಿದೆ. ಈ ಹಿಂದೆ ಪ್ರತಿ ಪ್ರಕರಣಗಳ ಇತ್ಯರ್ಥಕ್ಕೆ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಸರಾಸರಿ 7 ತಿಂಗಳಿಗಿಂತ ಹೆಚ್ಚು ಸಮಯ ವ್ಯಯವಾಗುತ್ತಿತ್ತು. ಆದರೆ, ಪ್ರಸ್ತುತ 67 ದಿನಕ್ಕೆ ಪ್ರಕರಣಗಳನ್ನು ವಿಲೇ ಮಾಡಲಾಗುತ್ತಿದೆ ಎಂದರು.
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 62,857 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಸಂಖ್ಯೆಯನ್ನು 26,726ಕ್ಕೆ ಇಳಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ 36,131 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನಾವು ಅಧಿಕಾರ ಸ್ವೀಕರಿಸುವಾಗ ಐದು ವರ್ಷಕ್ಕೆ ಮೇಲ್ಪಟ್ಟ 32777 ಪ್ರಕರಣಗಳಿದ್ದವು, ಈ ಸಂಖ್ಯೆಯನ್ನು 6,602ಕ್ಕೆ ಇಳಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಉಳಿದ ಪ್ರಕರಣಗಳನ್ನೂ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ಇದರಿಂದ ಜನರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.
ಮಾಲೀಕತ್ವದ ಗ್ಯಾರಂಟಿಗೆ ದರ್ಖಾಸ್ತು ಪೋಡಿ ಅಭಿಯಾನ..!
ದಶಕಗಳ ಹಿಂದೆ ಜಮೀನು ಮಂಜೂರು ಆಗಿದ್ದರೂ ಸಹ ಸರಿಯಾದ ದಾಖಲೆ ಇಲ್ಲದವರಿಗೆ ಜಮೀನಿನ ಮಾಲೀಕತ್ವದ ಗ್ಯಾರಂಟಿ ನೀಡುವ ಸಲುವಾಗಿ ದರ್ಖಾಸ್ತು ಪೋಡಿ ಕಾರ್ಯಕ್ರಮವನ್ನು ಅಭಿಯಾನ ಮಾದರಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಶುರುವಾಗಿದ್ದು, 26ಸಾವಿರ ಮಂಜೂರಿದಾರರ ಜಮೀನುಗಳನ್ನು ಸರ್ವೇಗೆ ಅಂಕಿತ ಹಾಕಲಾಗಿದೆ.
ಈ ಪೈಕಿ 5 ಸಾವಿರ ಜನರಿಗೆ ಈಗಾಗಲೇ ಸರ್ವೇ ಮುಗಿಸಿದ್ದೇವೆ. ಈ ಎಲ್ಲರಿಗೂ ಹೊಸ ಆರ್ಟಿಸಿ, ಪಹಣಿ ಹಾಗೂ ನಕ್ಷೆ ನೀಡಲಾಗುವುದು. ಇದು ಜಮೀನಿನ ಮಾಲೀಕತ್ವದ ಗ್ಯಾರಂಟಿಯಾಗಿದ್ದು, ಈ ಅಭಿಯಾನಕ್ಕೆ “ನನ್ನ ಭೂಮಿ” ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷದಲ್ಲಿ 5 ಸಾವಿರ ಜನರಿಗೆ ಪೋಡಿ ಮಾಡಿಕೊಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಕಳೆದ ಎರಡು ತಿಂಗಳಲ್ಲಿ 5 ಸಾವಿರ ಜನರಿಗೆ ಪೋಡಿ ದುರಸ್ಥಿ ಮಾಡಲಾಗಿದೆ. ನಮ್ಮ ಗುರಿ ದೊಡ್ಡದಿದೆ. ಕನಿಷ್ಟ 5 ರಿಂದ 7 ಲಕ್ಷ ಕುಟುಂಬಗಳಿಗೆ ಪೋಡಿ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಅಭಿಯಾನ ಮಾದರಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
Laxmi News 24×7