ಶಿಕ್ಷಕರು ತಮ್ಮ ಜ್ಞಾನ ಕೊಟ್ಟು ವಿದ್ಯಾರ್ಥಿಗಳ ಅರಿವನ್ನು ಉತ್ತೇಜಿಸಬೇಕು : ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಾಧ್ಯಾಪಕರು ಕೇವಲ ಸಂಬಳಕ್ಕೆ ಕೆಲಸ ಮಾಡಬಾರದು, ದೇಶ ಕಟ್ಟೋ ವಿದ್ಯಾರ್ಥಿಗಳನ್ನು ರೂಪಿಸಬೇಕು
ಬೆಂಗಳೂರು : “ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ರೀತಿ ಪ್ರಾಧ್ಯಾಪಕರು ತಮ್ಮ ಜ್ಞಾನವನ್ನು ಕೊಟ್ಟು ಅವರಲ್ಲಿ ಅರಿವಿನ ಬೆಳಕನ್ನು ಉತ್ತೇಜಿಸಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ನೂತನವಾಗಿ ನೇಮಕಗೊಂಡಿರುವ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಉದ್ಘಾಟಿಸಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.
“ನಿಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಮವಾಗಿ ತಯಾರು ಮಾಡಲು ಆಗದೇ ಇರಬಹುದು. ಆದರೆ, ಒಂದಷ್ಟು ಜನರನ್ನು ತಯಾರು ಮಾಡುವ ಶಕ್ತಿ ನಿಮ್ಮಲ್ಲಿದೆ. ನೀವು ಸಮಾಜಕ್ಕೆ ಉತ್ತಮ ಸಾಧಕರನ್ನು ನೀಡುವ ಗುರಿ ಇಟ್ಟುಕೊಳ್ಳಬೇಕು” ಎಂದು ತಿಳಿಸಿದರು.
“ವಿದ್ಯಾರ್ಥಿಗಳಿಗೆ ಸಮಯ ನೀಡಿ ಅವರ ಜೊತೆ ವೈಯಕ್ತಿಕವಾಗಿ ಸಂವಹನ ನಡೆಸಬೇಕು. ಶಿಕ್ಷಣದ ಮಹತ್ವವನ್ನು ಅವರಿಗೆ ತಿಳಿಸಬೇಕು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ ನಿಮ್ಮ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಭಾಂದವ್ಯ ಬೆಳೆಯಬೇಕು. ಕೇವಲ ಸಂಬಳಕ್ಕೆ ಕೆಲಸ ಮಾಡಬೇಡಿ” ಎಂದು ಕಿವಿಮಾತು ಹೇಳಿದರು.
“ಕೇವಲ ಪುಸ್ತಕದಲ್ಲಿ ಇರುವುದನ್ನು ಪಾಠ ಮಾಡಬೇಡಿ. ವಿದ್ಯಾರ್ಥಿಗಳ ನಡೆ, ನುಡಿ, ವಿಚಾರಧಾರೆ, ಚಿಂತನೆಗಳನ್ನು ದೇಶ ಕಟ್ಟುವ ರೀತಿ ತಯಾರು ಮಾಡಬೇಕು. ನಿಮ್ಮ ಜ್ಞಾನ ಭಂಡಾರವನ್ನು ಹೆಚ್ಚು ಮಾಡಿಕೊಳ್ಳಬೇಕು. ಹೆಚ್ಚಿನ ಪದ ಸಂಪತ್ತು, ಗ್ಲೋಬಲ್ ಮಟ್ಟದ ವಿಚಾರಗಳನ್ನು ತಿಳಿದುಕೊಳ್ಳಬೇಕು” ಎಂದರು.
“ಶಿಕ್ಷಕ ವೃತ್ತಿಯನ್ನು ಹಿಡಿಯಬೇಕು ಎಂದು ಬಹಳ ಕಷ್ಟಪಟ್ಟು ಈ ಸ್ಥಾನವನ್ನು ಅಲಂಕರಿಸಿದ್ದೀರಿ. ಈ ದೇಶದ ಭವಿಷ್ಯದ ಆಧಾರ ಸ್ತಂಬಗಳನ್ನು ತಯಾರು ಮಾಡುವ ಸ್ಥಾನದಲ್ಲಿ ಕುಳಿತಿರುವ ನಿಮಗೆ ಅಭಿನಂದನೆಗಳು. ನಿಮ್ಮ ಜೀವನ ಇಲ್ಲಿಗೆ ನಿಂತಿಲ್ಲ. ಶಿಕ್ಷಕರಾಗಿದ್ದವರು ಆನಂತರ ಐಎಎಸ್, ಕೆಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ನಾನು ಕೆಲಸಗಾರರನ್ನು ನೋಡಲು ಇಷ್ಟ ಪಡುವುದಿಲ್ಲ. ಕೆಲಸ ಸೃಷ್ಟಿಸುವವರನ್ನು ಇಷ್ಟ ಪಡುತ್ತೇನೆ. ಅಂತಹ ಶಕ್ತಿಯನ್ನು ಯುವ ಜನರಲ್ಲಿ ನೀವು ಬೆಳೆಸಬೇಕು” ಎಂದರು.
“ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾಂಗ ಪ್ರಜಾಪ್ರಭುತ್ವದ ನಾಲ್ಕು ಅಂಗಗಳು. ಈ ದೇಶದ ನಾಲ್ಕು ಆಧಾರ ಸ್ತಂಬಗಳು ಎಂದರೆ ಕೃಷಿಕ, ಸೈನಿಕ, ಕಾರ್ಮಿಕ, ಶಿಕ್ಷಕರು. ಈ ಜವಾಬ್ದಾರಿಯುತ ಹುದ್ದೆಯನ್ನು ಯಾವುದೇ ಲಂಚ ನೀಡದೆ ಪಡೆದಿದ್ದೀರಿ. ಈ ಕೆಲಸ ಕೊಡಿ ಎಂದು ಯಾವ ಜನಪ್ರತಿನಿಧಿಯ ಮನೆಗೂ ಅಲೆದಾಡಿಲ್ಲ” ಎಂದು ಹೇಳಿದರು.
“ಇಡೀ ದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕರ್ನಾಟಕ ಹೆಸರಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ತನಕ ನಮಗೆ ಸಾಟಿ ಯಾರೂ ಇಲ್ಲ. 200 ಎಂಜಿನಿಯರಿಂಗ್ ಕಾಲೇಜುಗಳು, 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಇವೆ. ಇಂಜಿನಿಯರ್, ವೈದ್ಯಕೀಯ ಓದದ ವಿದ್ಯಾರ್ಥಿಗಳನ್ನು ತಯಾರು ಮಾಡುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಕುದುರೆಯನ್ನು ರೇಸ್ ಅಲ್ಲಿ ಓಡುವ ಕುದುರೆ ಮಾಡುವುದು ಸುಲಭ. ಆದರೆ ಕತ್ತೆಯನ್ನು ಕುದುರೆ ಮಾಡುವುದು ಕಠಿಣ ಕೆಲಸ” ಎಂದು ತಿಳಿಸಿದರು.
Laxmi News 24×7