ಗದಗ, ಜನವರಿ 21: ಜಿಮ್ಸ್ ಆಸ್ಪತ್ರೆ ಗದಗ ಜಿಲ್ಲೆ ಅಷ್ಟೇ ಅಲ್ಲ ಹಾವೇರಿ, ಕೊಪ್ಪಳ, ಬಾಗಲಕೋಟೆಯ ಗಡಿ ಭಾಗದ ಸಾವಿರಾರು ರೋಗಿಗಳ ಚಿಕಿತ್ಸಾ ತಾಣ. ಆದರೆ, ಇತ್ತೀಚಿಗೆ ಈ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆರೋಪ ಕೇಳಿಬಂದಿದೆ. ಯಾಕಂದರೆ, ಮುಖ್ಯ ವೈದ್ಯಾಧಿಕಾರಿಗಳ ಕಿತ್ತಾಟದಿಂದ ಇಡೀ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಳಿ ತಪ್ಪಿದ ರೈಲು ಬಂಡಿಯಂತಾಗಿದೆ. ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ಹಾಗೂ ಜಿಮ್ಸ್ ಅಧೀಕ್ಷಕಿ ರೇಖಾ ಸೋನಾವನೆ ನಡುವೆ ಕಳೆದ ಎರಡು ವರ್ಷಗಳಿಂದ ಹೊಂದಾಣಿಕೆ ಆಗದೆ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಆಗಿದೆ. ಇಬ್ಬರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ.
ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ, ‘ನನ್ನಿಂದ ಎಲ್ಲ ಅಧಿಕಾರಗಳನ್ನ ಕಿತ್ತುಕೊಂಡಿದ್ದಾರೆ’ ಎಂದು ಜಿಮ್ಸ್ ಅಧೀಕ್ಷಕಿ ರೇಖಾ ಸೋನಾವನೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತ, ‘ನಾವೇನೂ ಕಿತ್ತುಕೊಂಡಿಲ್ಲ, ಎಲ್ಲ ಅಧಿಕಾರ ಅವರಿಗೆ ಕೊಟ್ಟಿದ್ದೇನೆ’ ಎಂದು ಜಿಮ್ಸ್ ನಿರ್ದೇಶಕರ ಪರ ಪ್ರಭಾರಿ ನಿರ್ದೇಶಕ ರಾಜು ಜಿಎಂ ಹೇಳಿದ್ದಾರೆ. ಜಿಮ್ಸ್ ಅಧೀಕ್ಷಕಿ ಹಿಂದೆ ಜಿಮ್ಸ್ ನಿರ್ದೇಶಕರ ಹುದ್ದೆಯಲ್ಲಿ ಇದ್ದರು. ಮೂರೇ ತಿಂಗಳಲ್ಲಿ ಹುದ್ದೆಯಿಂದ ಕೆಳಗಿಳಿಸಿದರು ಎಂಬ ಅಸಮಾಧಾನ ಅವರಲ್ಲಿ ಇದೆ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ಅವರಿಗೆ ಎಲ್ಲ ಅನುದಾನ ಮತ್ತು ಅಧಿಕಾರ ಕೊಡಲಾಗಿದೆ ಎಂದು ನಿರ್ದೇಶಕ ಬಸವರಾಜ್, ಬೊಮ್ಮನಹಳ್ಳಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಪ್ರಬಾರಿ ನಿರ್ದೇಶಕರ ಹೇಳಿಕೆಯಿಂದ ರೊಚ್ಚಿಗೆದ್ದ ಅಧೀಕ್ಷಕಿ ರೇಖಾ ಸೋನಾವನೆ, ಜಿಮ್ಸ್ ಪ್ರಭಾರಿ ನಿರ್ದೇಶಕ ರಾಜು ಜಿಎಂಗೆ ಪೋನ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ವರ್ಷಗಳಿಂದಲೇ ಜಿಮ್ಸ್ ನಿರ್ದೇಶಕರು ಎಲ್ಲವನ್ನೂ ನನ್ನ ತಲೆಗೆ ಕಟ್ಟುತ್ತಿದ್ದಾರೆ. ಜಿಮ್ಸ್ನಲ್ಲಿ ಆಗಿರುವ ಪ್ರಮಾದಗಳನ್ನು ಅಧೀಕ್ಷಕಿಯ ಹೆಸರಿಗೆ ತಳಕು ಹಾಕುತ್ತಿರುವುದು ಯಾಕೆ? ಇರುವ ವಿಷಯನ್ನು ಮಾಧ್ಯಮದವರ ಮುಂದೆ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.