ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವಕ್ಕೆ ಸಾಕ್ಷಿಯಾಗಿರುವ ಬೆಳಗಾವಿಯಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ ಮತ್ತು ಸುವರ್ಣ ವಿಧಾನಸೌಧದ ಆವರಣದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ಮೊಟಕುಗೊಂಡಿದ್ದ ಕಾರ್ಯಕ್ರಮ ಮಂಗಳವಾರ (ಜ.21) ಆಯೋಜಿಸಲಾಗಿದೆ.
ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಎದುರಿನಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬೆಳಗ್ಗೆ 10.30ಕ್ಕೆ ಅನಾವರಣಗೊಳಿಸಲಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿ ಸಚಿವರು, ಸಂಸದರು, ಶಾಸಕರು, ಸ್ವಾತಂತ್ರ್ಯ ಯೋಧರು ಹಾಗೂ ಅವರ ಕುಟುಂಬಸ್ಥರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿತ 1924ರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮ ಗಾಂಧೀಜಿಯವರು ಮಾಡಿದ ಭಾಷಣ ಮತ್ತು ನಿರ್ಣಯಗಳಿಂದ ಕೂಡಿದ ಕನ್ನಡ ಹಾಗೂ ಆಂಗ್ಲ ಭಾಷೆಯ “ಗಾಂಧಿ ಭಾರತ-ಮರುನಿರ್ಮಾಣ” ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಲಿದ್ದಾರೆ.25 ಅಡಿ ಎತ್ತರ ಗಾಂಧೀಜಿ ಪ್ರತಿಮೆ : ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ನಿರ್ಮಿಸಲಾದ ಮಹಾತ್ಮ ಗಾಂಧೀಜಿಯವರ ಪ್ರತಿಮೆ ನಿರ್ಮಾಣಕ್ಕೆ ಸುಮಾರು 20 ಟನ್ ತೂಕದ ಕಂಚು ಬಳಸಲಾಗಿದೆ. ಇದು ನೆಲಮಟ್ಟದಿಂದ ಸುಮಾರು 37 ಅಡಿ ಎತ್ತರದಲ್ಲಿದೆ. ಪೀಠದ ಎತ್ತರವೇ 12 ಅಡಿಯಿದ್ದು, ಪ್ರತಿಮೆಯು 17.40 ಅಡಿ ಅಗಲ ಮತ್ತು 14 ಅಡಿ ಉದ್ದವಿದೆ. ಒಟ್ಟು 25 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಪೀಠದ ಸುತ್ತಲೂ ಅವರ ಸಂದೇಶಗಳನ್ನು ಬರೆಯಲಾಗಿದೆ. ಪ್ರತಿಮೆಯು ಒಟ್ಟು 4.83 ಕೋಟಿ ರೂ. ವೆಚ್ಚದಲ್ಲಿ ಪಂಚಲೋಹದಿಂದ ನಿರ್ಮಾಣಗೊಂಡಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಗಾಂಧೀಜಿಯವರ ಈ ಪ್ರತಿಮೆಯನ್ನು ನಿರ್ಮಿಸಿದ್ದು ವಿಶೇಷ.
Laxmi News 24×7