ಬೆಳಗಾವಿ: ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಇಂದು ನಡೆದಿದೆ.
ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪದಮುಕಿ(43) ಕೊಲೆಯಾದ ಮಹಿಳೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(24) ಕೊಲೆ ಮಾಡಿದ ಆರೋಪಿ. ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ಮಗಳು ಛಾಯಾ, ಅಳಿಯ ಶುಭಂ ಜೊತೆ ವಾಸವಾಗಿದ್ದರು. ಕಳೆದ 7 ತಿಂಗಳ ಹಿಂದೆ ಅಷ್ಟೇ ಇವರ ಮದುವೆ ಆಗಿತ್ತು.
![]()
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಗಳಿಗೆ ಸಂಕ್ರಾಂತಿ ಊಟ ಕೊಡೊಕೆ ರೇಣುಕಾ ಪದಮುಕಿ ಬಂದಿದ್ದರು. ಈ ವೇಳೆ, ನಮ್ಮ ಮನೆಗೆ ಏಕೆ ಬರುತ್ತಿಯಾ ಎಂದು ಅಳಿಯ ಶುಭಂ ತಗಾದೆ ತೆಗೆದಿದ್ದ. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಅತ್ತೆಯ ತೊಡೆಯ ಭಾಗಕ್ಕೆ ಶುಭಂ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರೇಣುಕಾ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Laxmi News 24×7