ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿ ಉಳಿದಿದ್ದ ಐವರಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದು, ಈ ಮೂಲಕ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ 17 ಮಂದಿಗೆ ಜಾಮೀನು ಸಿಕ್ಕಂತಾಗಿದೆ.
ಆರೋಪಿಗಳಾದ ಪವನ್, ರಾಘವೇಂದ್ರ, ನಂದೀಶ್, ಧನರಾಜ್ ಹಾಗೂ ವಿನಯ್ ಎಂಬವರಿಗೆ ಜಾಮೀನು ನೀಡಿ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
1 ಲಕ್ಷ ರೂ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ಒದಗಿಸಬೇಕು. ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕ್ಷಿದಾರರಿಗೆ ಬೆದರಿಕೆ ಹಾಕಬಾರದು ಹಾಗೂ ಮುಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಕೂಡದು ಎಂದು ಷರತ್ತುವಿಧಿಸಿ ನ್ಯಾ.ಜೈಶಂಕರ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿದರು.
ಕಳೆದ ಜೂನ್ 8ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆ ಶೆಡ್ನಲ್ಲಿ ಹತ್ಯೆ ಮಾಡಿ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 17 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.
ಸೆ.23ರಂದು ಪೊಲೀಸರ ಮುಂದೆ ಶರಣಾಗಿದ್ದ ಕಾರ್ತಿಕ್, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಪ್ರಕರಣ ರವಿಶಂಕರ್ (ಎ8) ಹಾಗೂ ದೀಪಕ್‌ಗೆ (ಎ13) ಅ.14ರಂದು ಸಿಸಿಹೆಚ್ ಕೋರ್ಟ್ ಜಾಮೀನು ನೀಡಿತ್ತು. ಡಿ.13ರಂದು ನಟ ದರ್ಶನ್, ಪವಿತ್ರಾ ಗೌಡ ಹಾಗೂ ಪ್ರದೂಶ್ ಸೇರಿದಂತೆ ಒಟ್ಟು 7 ಮಂದಿಗೆ ಜಾಮೀನು ಸಿಕ್ಕಿತ್ತು.