ಧಾರವಾಡ, ಡಿಸೆಂಬರ್ 23: ಧಾರವಾಡ (Dharwad) ಜಿಲ್ಲೆಯ ಅಳ್ನಾವರ (Alnavara) ತಾಲೂಕಿನ ಕಡಬಗಟ್ಟಿ ಬಳಿಯ ಧಾರವಾಡ-ಅಳ್ನಾವರ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಐಶರ್ ವಾಹನದಲ್ಲಿದ್ದ ಶಿರಸಂಗಿಯ ಹನುಮಂತಪ್ಪ ಮಲ್ಲಾಡ (45), ಮಹಾಂತೇಶ್ ಚವ್ಹಾಣ್ (40), ಮಹದೇವ ಹಾಲೊಳ್ಳಿ (40) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಐವರಿಗೆ ಗಂಭೀರ ಗಾಯಾವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ರೈತರಾದ ಹನುಮಂತಪ್ಪ ಮಲ್ಲಾಡ, ಮಹಾಂತೇಶ್ ಚವ್ಹಾಣ್ ಮತ್ತು ಮಹದೇವ ಹಾಲೊಳ್ಳಿ ಐಶರ್ ವಾಹನದಲ್ಲಿ ಮೇವಿನ ಹೊಟ್ಟು ತುಂಬಿಕೊಂಡು ಗೋವಾದ ಕಡೆಗೆ ಹೊರಟಿದ್ದರು. ಗೋವಾದಲ್ಲಿ ಮೇವಿನ ಹೊಟ್ಟಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಹೊಟ್ಟು ಮಾರಾಟ ಮಾರಲು ಧಾರವಾಡ ಕಡೆಯಿಂದ ಗೋವಾಗೆ ತೆರಳುತ್ತಿದ್ದರು.
ಎದುರಿಗೆ, ಗೋವಾದಿಂದ ಚಿತ್ರದುರ್ಗದ ಕಡೆ ಟಿಟಿ ವಾಹನ ಬರುತ್ತಿತ್ತು. ಅಳ್ನಾವರ ತಾಲೂಕಿನ ಕಡಬಗಟ್ಟಿ ಬಳಿ ಐಶರ್ ಮತ್ತು ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.