ಬೆಂಗಳೂರು, ಡಿಸೆಂಬರ್ 23: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಸಂಬಂಧ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಅದು ಮುಗಿದುಹೋದ ಅಧ್ಯಾಯ ಎಂದಿದ್ದಾರೆ.
ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನು ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿತ್ತು. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ.
ಹಕ್ಕುಚ್ಯುತಿ ಆಗಿದೆ ಅಂತ ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದು ಅವರ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ.
ಎಫ್ಐಆರ್ ಆಗಿದೆ, ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮ್ಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದರೂ ಕಳುಹಿಸಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದು ಹೊರಟ್ಟಿ ಹೇಳಿದರು.