ಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಇಂದು ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಒಗ್ಗಟ್ಟಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದೇವೆ. ಪಕ್ಷಾತೀತವಾಗಿ ಈ ಕೆಲಸವಾಗಿದೆ. ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನ ನಡೆದಿದೆ. 6 ಲಕ್ಷಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಿತ್ಯ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ನಾಡೋಜ ಮಹೇಶ್ ಜೋಷಿ ಅವರು ಶ್ರಮಿಸಿದ್ದಾರೆ. ಸಾಹಿತ್ಯ ಸಮಯದಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ಹೊರ ದೇಶದಿಂದಲೂ ಕನ್ನಡ ಅಭಿಮಾನಿಗಳು ಭಾಗಿಯಾಗಿದ್ದರು. ಕನ್ನಡ ಹೆಚ್ಚು ಮಾತನಾಡುವ ಜಿಲ್ಲೆ ನಮ್ಮ ಮಂಡ್ಯ. ಅಚ್ಚುಕಟ್ಟಾಗಿ ಸಮ್ಮೇಳನ ನಡೆದಿದೆ. ಸಮ್ಮೇಳನ ಯಶಸ್ವಿಯಾಗಲು ಕಾರಣರಾದ ಜಿಲ್ಲೆಯ ಜನರಿಗೆ ಧನ್ಯವಾದಗಳು ಎಂದರು.
ಸಭಾಪತಿ ಬಸವರಾಜು ಹೊರಟ್ಟಿ ಮಾತನಾಡಿ, ಇಡೀ ಕರ್ನಾಟಕದಲ್ಲಿ ಮಂಡ್ಯದಲ್ಲಿ ಮಾತ್ರ ಕನ್ನಡವೊಂದನ್ನೇ ಮಾತನಾಡ್ತಾರೆ. 99% ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ. ಇಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಂತಸ ತಂದಿದೆ. ನಿರ್ಣಯ ಮಾಡುವುದು ಮುಖ್ಯ ಅಲ್ಲ, ಅವುಗಳನ್ನ ಜಾರಿಗೆ ತರಬೇಕು. ಕೋಟಿ ಕೋಟಿ ಹಣ ಖರ್ಚು ಮಾಡಿ ಸಮ್ಮೇಳನ ಮಾಡುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಗಮನಕ್ಕೆ ತಂದು ಅನುಷ್ಠಾನ ಮಾಡಬೇಕು ಎಂದು ಹೇಳಿದರು.