ಹಾವೇರಿ : ಜಿಲ್ಲೆಯಲ್ಲಿ ಅತ್ತೆ -ಸೊಸೆ ತಮಗೆ ಬಂದ ಗೃಹಲಕ್ಷ್ಮಿ ಹಣದಿಂದ ಕೃಷಿಗೆ ಉಪಯೋಗವಾಗುವ ರೋಟವೇಟರ್ ಖರೀದಿ ಮಾಡಿದ್ದಾರೆ. ಜಿಲ್ಲೆ ಸವಣೂರು ತಾಲೂಕು ಮಂಟಗಣಿ ಗ್ರಾಮದ ಶಾರದಾ ಮತ್ತು ಲಕ್ಷ್ಮಿ ರೋಟವೇಟರ್ ಖರೀದಿಸಿದ ಅತ್ತೆ- ಸೊಸೆ.
ಇಬ್ಬರು ತಮಗೆ ಬಂದ 14 ತಿಂಗಳುಗಳ ತಲಾ 28 ಸಾವಿರ ರೂಪಾಯಿಗಳನ್ನು ಕೂಡಿಸಿ ಒಟ್ಟು 48 ಸಾವಿರ ರೂ.ಗಳನ್ನ ತಮ್ಮ ಪುತ್ರ ಅಜೀತ್ಗೆ ನೀಡಿದ್ದಾರೆ. ಅಲ್ಲದೆ ಉಳಿದ ಹಣವನ್ನ ಸ್ವಸಹಾಯ ಸಂಘದಿಂದ ಸಾಲ ಪಡೆದು ರೋಟವೇಟರ್ ಕೊಡಿಸಿದ್ದಾರೆ.
ಅಜೀತ್ ಈಗ ಸುಮಾರು 1 ಲಕ್ಷದ 10 ಸಾವಿರ ರೂಪಾಯಿ ಕೊಟ್ಟು ಹೊಸ ರೋಟವೇಟರ್ ತಂದಿದ್ದಾರೆ. ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಇದ್ದು, ಸೂಕ್ತ ದಾಖಲೆ ನೀಡಿದರೆ ರೋಟವೇಟರ್ ಅಂಗಡಿಯವರು 10 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದ್ದಾರೆ.
ಈ ಬಗ್ಗೆ ಅಜೀತ್ ತಾಯಿ ಶಾರದಾ ಮಾತನಾಡಿ, ‘ನಮ್ಮ ಮಗನಿಗೆ ಮೊದಲಿನಿಂದಲೂ ಟ್ರ್ಯಾಕ್ಟರ್ ತೆಗೆದುಕೊಳ್ಳಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ನಾವು ಈ ಹಣವನ್ನು ನೀಡಿದ್ದೇವೆ. ನಮ್ಮ ಹೊಲದಲ್ಲಿ ಶೇಂಗಾ, ಅಲಸಂದಿಯನ್ನ ಬೆಳೆಯುತ್ತೇವೆ. ಹೀಗಾಗಿ ನಮಗೆ ರೋಟವೇಟರ್ ಅವಶ್ಯಕತೆ ಇತ್ತು. ಅಜೀತ್ ನಮ್ಮ ಜಮೀನಿನಲ್ಲಿ ರೋಟವೇಟರ್ ಉಪಯೋಗಿಸುವುದಲ್ಲದೆ, ಕೆಲಸವಿಲ್ಲದ ದಿನಗಳಲ್ಲಿ ಗ್ರಾಮದ ಬೇರೆ ರೈತರ ಜಮೀನಿಗೆ ಬಾಡಿಗೆಗೂ ಹೋಗುತ್ತಾನೆ. ಸಿದ್ದರಾಮಯ್ಯ ಸರ್ಕಾರದಿಂದ ನಮಗೆ ಬಹಳ ಸಹಾಯವಾಗಿದೆ. ಅವರಿಂದ ಬಹಳ ಅನುಕೂಲವಾಗಿದೆ. ಅವರಿಗೆ ವಂದನೆ ತಿಳಿಸುತ್ತೇವೆ’ ಎಂದು ಸಂತಸ ಹಂಚಿಕೊಂಡರು.