ತುಮಕೂರು: ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದೇ ಮೊದಲ ಬಾರಿ ತುಮಕೂರು ನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು.
ನಗರದ ಮಹಾವೀರ ಭವನದ ಬಳಿಯಿಂದ ಹೊರಟ ಶೋಭಾಯಾತ್ರೆಯಲ್ಲಿ ಅಭಿನವ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಲಾಯಿತು. ಅವರೊಂದಿಗೆ ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಸಾಗಿದರೆ, ವಾದ್ಯ ವೃಂದ ಹಾಗೂ ಜೈನ ಸಮುದಾಯದವರು ಶೋಭಾಯಾತ್ರೆಯಲ್ಲಿ ಪಾಲ್ಕೊಂಡು ಪುನೀತರಾದರು. ಶೋಭಯಾತ್ರೆಯು ಎಂ.ಜಿ. ರಸ್ತೆ, ಗುಂಚಿ ಚೌಕ, ಚರ್ಚ್ ಸರ್ಕಲ್, ಮಂಡಿಪೇಟೆ ಸರ್ಕಲ್ ಮಾಗವಾಗಿ ಪಾರ್ಶ್ವನಾಥ ದಿಗಂಬರ ಜಿನಮಂದಿರ ತಲುಪಿತು. ಜಿನಮಂದಿರದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜಾದಿಗಳನ್ನು ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು.