ಬೆಳಗಾವಿ: ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, “ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಅಂತಾ ತಿಳಿಸಿಲ್ಲ. ಇದುವರೆಗೆ ನನ್ನ ಪ್ರಶ್ನೆಗೆ ಯಾರೂ ಉತ್ತರಿಸಿಲ್ಲ” ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದ ಮೇಲೆ ಬಂಧಿತರಾದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಶುಕ್ರವಾರ ಬೆಳಿಗ್ಗೆ 11.10ಕ್ಕೆ ನಗರದ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಸ್ಪರ್ಶಾ ಡಿಸೋಜಾ ಅವರ ಮುಂದೆ ಸಿ.ಟಿ. ರವಿ ಅವರನ್ನು ಹಾಜರುಪಡಿಸಲಾಯಿತು. ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ವಕೀಲ ಎಂ.ಬಿ.ಝಿರಲಿ ಅವರು ಸಿ.ಟಿ. ರವಿ ಪರ ವಕಾಲತ್ತು ವಹಿಸಿದ್ದಾರೆ.
“ನಿನ್ನೆ ರಾತ್ರಿಯಿಂದ ನನ್ನ ಮೇಲೆ ಮೂರು ಬಾರಿ ಹಲ್ಲೆ ಮಾಡಲಾಗಿದೆ. ಸುತ್ತಲೂ ಪೊಲೀಸರೇ ಇದ್ದರು. ಅವರೇ ಹಲ್ಲೆ ಮಾಡಿರಬಹುದು. ಪ್ರತಿ 10 ನಿಮಿಷಕ್ಕೆ ಅವರಿಗೆ ಕಾಲ್ ಬರುತಿತ್ತು. ಅದರಲ್ಲಿ ಬಂದ ನಿರ್ದೇಶನದಂತೆ ಅವರು ವರ್ತಿಸುತ್ತಿದ್ದರು. ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎನ್ನುವುದನ್ನೂ ತಿಳಿಸಿಲ್ಲ. ನನ್ನ ಪ್ರಶ್ನೆಗೆ ಯಾರು ಉತ್ತರಿಸಿಲ್ಲ” ಎಂದು ಸಿ.ಟಿ.ರವಿ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
“ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ನಾನು ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಲಿಲ್ಲ ಎಂದು ಸಿ.ಟಿ.ರವಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ನ್ಯಾಯಾಧೀಶರು” ದಾಖಲಿಸಿಕೊಂಡಿದ್ದಾರೆ.