ಬೆಳಗಾವಿ: ಎಂಟು ದಿನಗಳ ಕಾಲ ನಡೆದ ಬೆಳಗಾವಿ ಅಧಿವೇಶನದಲ್ಲಿ ಸುಮಾರು 64 ಗಂಟೆಗಳ ಕಾಲ ಕಾರ್ಯಕಲಾಪ ನಡೆಸಲಾಯಿತು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 16 ವಿಧೇಯಕಗಳನ್ನು ಮಂಡಿಸಿ, ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. 2024ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ ಮತ್ತು 2024ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕಗಳನ್ನು ಹಿಂಪಡೆಯಲಾಗಿದೆ ಎಂದರು.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ 8 ವರದಿಗಳು ಮತ್ತು ಕರ್ನಾಟಕ ವಿಧಾನಮಂಡಲ ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳ 7 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 49 ಸದಸ್ಯರು ಭಾಗವಹಿಸಿದ್ದು, ಸುಮಾರು 13 ಗಂಟೆ 11 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ. ನಿಯಮ 60 ರಡಿಯಲ್ಲಿ ನೀಡಿದ್ದ 2 ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದು ಸೇರಿದಂತೆ ಒಟ್ಟು 4 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 3004 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 137 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2,237 ಪ್ರಶ್ನೆಗಳ ಪೈಕಿ 1,794 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 444 ಸೂಚನೆಗಳ ಪೈಕಿ 294 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 80 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 5 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.