ಬೆಳಗಾವಿ: ”ಅಪೆಂಡಿಕ್ಸ್ ಇ ನಲ್ಲಿ 4,000 ಕೋಟಿ ರೂ., ಗ್ರಾಮೀಣ ರಸ್ತೆಗೆ 2,000 ಕೋಟಿ ರೂ. ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ರೂ. ವಿತರಣೆ ಮಾಡುತ್ತೇವೆ. ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿರಲಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ ಪರವಾಗಿರುತ್ತಾರೆ. ಇದು ಖಚಿತ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ”ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ವಿಧಾನಸಭೆ, ಪರಿಷತ್ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ” ಎಂದು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದರು.’ಸತ್ಯದ ದಾಖಲೆಗಳನ್ನು, ಅಂಕಿ – ಅಂಶಗಳನ್ನು ಜನರ ಮುಂದಿಟ್ಟು ಎದೆ ಎತ್ತಿ ಸತ್ಯ ಹೇಳಿ. ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಅತಿ ಹೆಚ್ಚು ನೋಟಿಸ್ ಕೊಟ್ಟಿರುವುದು, ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕ್ಫ್ ಆಸ್ತಿ ತೆರವುಗೊಳಿಸಲು ನೋಟಿಸ್ ಕೊಡಲಾಗಿದೆ. ಹೀಗಾಗಿ, ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ” ಎಂದು ಕಿಡಿಕಾರಿದರು.