ಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿ ಅವರ ಇಡೀ ಜೀವನ ಸಾರುವ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಕಲಾಪ ವೀಕ್ಷಣೆಗೆ ಸುವರ್ಣ ಸೌಧಕ್ಕೆ ಬರುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಮಹಾತ್ಮ ಗಾಂಧೀಜಿ ಅವರ ಚಿತ್ರಗಳನ್ನೂ ಕಂಡು ಇತಿಹಾಸವನ್ನು ಮೆಲುಕು ಹಾಕುತ್ತಿದ್ದಾರೆ.
ಬೆಳಗಾವಿಯಲ್ಲಿ 1924ರ ಡಿ.26, 27ರಂದು ನಡೆದ ಕಾಂಗ್ರೆಸ್ ಅಧಿವೇಶನ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ. ಈ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಹಾಗಾಗಿ, ರಾಜ್ಯ ಸರ್ಕಾರ ವರ್ಷವಿಡೀ ‘ಗಾಂಧಿ ಭಾರತ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೆಆರ್‌ಐಡಿಎಲ್ ವತಿಯಿಂದ ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಅವರ ವಿಶೇಷ ಫೋಟೋಗಳ ಪ್ರದರ್ಶನ ಆಯೋಜಿಸಲಾಗಿದೆ. ದೆಹಲಿಯ ಗಾಂಧಿ ಮ್ಯೂಸಿಯಂನಿಂದ ಈ ಫೋಟೋಗಳನ್ನು ತರಲಾಗಿದ್ದು, ಗಾಂಧೀಜಿಯ ಇಡೀ ಜೀವನವನ್ನು ಫೋಟೋಗಳಲ್ಲಿ ನೋಡಬಹುದು