Breaking News

ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಸಂಘರ್ಷ ಸಾಧ್ಯತೆ

Spread the love

ಡಿಸೆಂಬರ್​ 11: 2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ (Lingayat Panchamsali) ಸಮುದಾಯದವರ ಹೋರಾಟ ಕರ್ನಾಟಕದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಂಗಳವಾರ (ಡಿ.10) ರಂದು ಸುವರ್ಣಸೌಧವನ್ನು ಮುತ್ತಿಗೆ ಹಾಕಲು ಯತ್ನಿಸಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದರು. ಇದು, ಪಂಚಮಸಾಲಿ ಸಮುದಯಾದವರನ್ನು ಕೆರಳಿಸಿದೆ. ಈ ಮಧ್ಯೆ ಪಂಚಮಸಾಲಿ ಸಮುದಾಯದವರ ಹೋರಾಟಕ್ಕೆ ಟ್ವಿಸ್ಟ್​​ ಸಿಕ್ಕಿದೆ. ಹೌದು, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದೆಂದು ಹಿಂದೂಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಇಂದು (ಡಿ.11) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಲಿಂಗಾಯತ ಪಂಚಮಸಾಲಿ ಹೋರಾಟ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.ಪಂಚಮಸಾಲಿ ಹೋರಾಟಕ್ಕೆ ಬಿಗ್ ಟ್ವಿಸ್ಟ್: ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಸಂಘರ್ಷ ಸಾಧ್ಯತೆ

ಹಿಂದುಳಿದ ಜಾತಿಗಳ ಒಕ್ಕೂಟ ನೀಡಿದ ಪತ್ರದಲ್ಲಿ ಏನಿದೆ?

“ನಮ್ಮ ರಾಜ್ಯದಲ್ಲಿ 2002 ರಿಂದ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಎಂಬುದಾಗಿ ವಿಂಗಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವರ್ಗ-1ಕ್ಕೆ ಶೇಕಡಾ 48 ರಷ್ಟು, ಪ್ರವರ್ಗ-2ಎಗೆ ಶೇಕಡಾ 15 ರಷ್ಟು, ಪ್ರವರ್ಗ-2ಬಿಗೆ ಶೇಕಡಾ 4 ರಷ್ಟು, ಪ್ರವರ್ಗ-3ಎಗೆ ಶೇಕಡಾ 4 ರಷ್ಟು ಹಾಗೂ ಪ್ರವರ್ಗ-3ಬಿಗೆ ಶೇಕಡಾ 5 ರಷ್ಟು ಒಟ್ಟು ಮೀಸಲಾತಿಯ ಶೇಕಡಾ 32 ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಲಾಗಿದೆ. 2002ರಿಂದ ಈವರೆವಿಗೂ ಅದೇ ರೀತಿ ಮೀಸಲಾತಿಯನ್ನು ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಪಡೆಯುತ್ತಿವೆ.

ರಾಜ್ಯದಲ್ಲಿನ ಪಂಚಮಸಾಲಿ ಅಂಗಾಯತರು ಉಲ್ಲೇಖ-2ರ ಸರ್ಕಾರದ ಆದೇಶದ ಅನ್ವಯ ಪ್ರವರ್ಗ-3ಬಿ ಮೀಸಲಾತಿಯನ್ನು ಪಡೆಯುತ್ತಿದ್ದು, ಇತ್ತಿಚೆಗೆ ಈ ಸಮುದಾಯವನ್ನು ಪ್ರವರ್ಗ-3 ಯಿಂದ ಪ್ರವರ್ಗ-2ಎಗೆ ಬದಲಾಯಿಸಿ ಶೇಕಡಾ 15 ರಷ್ಟರ ಮೀಸಲಾತಿಯಡಿಯಲ್ಲಿ ಪ್ರವರ್ಗ-2ಎ ನಲ್ಲಿ ಮೀಸಲಾತಿ ಕೊಡಲು ಒತ್ತಾಯಿಸಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದು, ಧರಣಿಗಳನ್ನು ಮಾಡಿತ್ತಿದ್ದಾರೆ. ಹಾಗೂ ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ.

2022-23ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪ್ರವರ್ಗ-2ಬಿರಲ್ಲಿ ಬರುವ ಮುಸ್ಲಿಂರ ಶೇಕಡಾ 41 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2ಡಿ ಎಂದು ಹೊಸದಾಗಿ ವರ್ಗಿಕರಿಸಿ ಪ್ರವರ್ಗ-2ಸಿಗೆ ಶೇಕಡಾ 2 ರಷ್ಟು ಮತ್ತು ಪ್ರವರ್ಗ-2ಡಿಗೆ ಶೇಕಡಾ 2 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದು ಆದೇಶವನ್ನು ಹೊರಡಿಸಲಾಗಿತ್ತು.

ಈ ಹಿಂದೆ ಪ್ರವರ್ಗ-3ಎನಲ್ಲಿ ಬರುವ ಇತಿಗಳನ್ನು ಪ್ರವರ್ಗ-2ಸಿಗೆ ಸೇರಿಸಿ ಮತ್ತು ಪ್ರವರ್ಗ-3ಬಿ ನಲ್ಲಿ ಬರುವ ಜಾತಿಗಳನ್ನು ಪ್ರವರ್ಗ-2ಡಿಗೆ ಸೇರಿಸಿ ಈ ಹಿಂದೆ ಪ್ರವರ್ಗ-3ರ ಮೀಸಲಾತಿ ಶೇಕಡಾ 4 ರಷ್ಟು ಮತ್ತು ಹೊಸ ಆದೇಶದ ಮೀಸಲಾತಿ ಶೇಕಡಾ 2 ರಷ್ಟು ಒಟ್ಟು ಸೇರಿ ಪ್ರವರ್ಗ-2ಸಿಗೆ ಒಟ್ಟು ಶೇಕಡಾ 6 ರಷ್ಟು ಮತ್ತು ಪ್ರವರ್ಗ-2ಡಿಗೆ ಶೇಕಡಾ 7 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಲಾಗಿದೆ.

ಬಿಜೆಪಿ ಸರ್ಕಾರದ ಆದೇಶವನ್ನು ಮುಸ್ಲಿಂ ಸಮುದಾಯದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಂದಿನ ಬಿಜೆಪಿ ಸರ್ಕಾರದ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ 2002ರ ಆದೇಶವನ್ನು ಪಾಲನೆ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲದಲ್ಲಿರುವುದರಿಂದ ಬಿಜೆಪಿ ಸರ್ಕಾರದ ಆದೇಶವು ಜಾರಿಯಾಗಿಲ್ಲ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ 2ಎ ಯಾವುದೇ ಸಮುದಾಯ/ ವರ್ಗಗಳನ್ನು ಸೇರ್ಪಡೆಗೊಳಿಸಬಾರದೆಂದು ಪಿಐಎಲ್​ ರಾಘವೇಂದ್ರ v/s ಸ್ಟೇಟ್ ಆಪ್ ಕರ್ನಾಟಕ ಮತ್ತು ಇತರರು ಪ್ರಕರಣವು ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಅರ್ಜಿದಾರರು ರಾಜ್ಯದ ಹಿಂದುಳಿದ ವರ್ಗದ ಮೀಸಲಾತಿ ಪಟ್ಟಿಯ ಪ್ರವರ್ಗ 2ಎಗೆ ಯಾವುದೇ ಜಾತಿಗಳನ್ನು ಸೇರಿಸಬಾರದೆಂದು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರವರ್ಗ-1ಎಗೆ ಮೀಸಲಾತಿ ಪ್ರಮಾಣ ಬದಲಾವಣೆ ಮತ್ತು ಯಾವುದೇ ಸಮುದಾಯಗಳನ್ನು ಪ್ರವರ್ಗ-2ಎಗೆ ಸೇರಿಸುವುದು ಅಥವಾ ಕೈ ಬಿಡುವುದನ್ನು ಉಚ್ಛ ನ್ಯಾಯಾಲಯದ ಮುಂದಿನ ಅನುಮತಿ ಇಲ್ಲದೆ ಪಾರಿಗೊಳಿಸುವುದಿಲ್ಲವೆಂದು ಅಫಿಡವಿಟ್​ ನ್ಯಾಯಾಲಕ್ಕೆ ಸಲ್ಲಿಸಲಾಗಿದೆ. ಅದರಂತೆ ಪ್ರಕರಣವು ಉಚ್ಚ ನ್ಯಾಯಾಲದಲ್ಲಿ ಬಾಕಿ ಇದೆ.

ಪಂಚಮಸಾಲಿ ಅಂಗಾಯತ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರೆದ ಸಮುದಾಯವಾಗಿದೆ. “ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿ ವರದಿ” ಈ ಎಲ್ಲಾ ವರದಿಗಳಲ್ಲಿ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜವೆಂದು ವರದಿ ಮಾಡಿವೆ. ಈ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಾಲಿತಿಯಲ್ಲಿ ಸೇರಿಸಿದಲ್ಲಿ ಹಾಲಿ ಇರುವ ಪ್ರವರ್ಗ-2ಎರಲ್ಲಿ ಬರುವ ತೀರಾ ಹಿಂದುಳಿದ ಜಾತಿಗಳಾದ ಆಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಎಲ್ಲಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ, ಪಂಚಮಸಾಲಿ ಸಮುದಾಯವೇ ಎಲ್ಲಾ ಉದ್ಯೋಗ, ಶಿಕ್ಷಣ, ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುತ್ತದೆ. ಇದರಿಂದ ಪ್ರವರ್ಗ- 2ಎರಲ್ಲಿ ಇರುವ ಜಾತಿಗಳಿಗೆ ಮಿಸಲಾತಿಯೇ ಸೀಗುವುದಿಲ್ಲ.

ಆದ್ದರಿಂದ ಯಾವುದೇ ಕಾರಣಕ್ಕೂ ಪಂಚಮಸಾಲಿ ಅಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಗೆ ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಮನವಿ ಮಾಡಿದೆ. ಒಂದು ವೇಳೆ ಪಂಚಮಸಾಲಿ ಅಂಗಾಯತ ಸಮುದಾಯವು ಪ್ರವರ್ಗ-2ಎ ಮೀಸಲಾತಿಗೆ ಸೇರಿದ್ದೇ ಆದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಹಾಗೂ ಹೋರಟಗಳನ್ನು ಮಾಡುತ್ತೇವೆ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ಈ ಮೂಲಕ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಜಾತಿ ಮೀಸಲಾತಿ ವಿಚಾರವಾಗಿ ಹೋರಾಟ ಮತ್ತೊಂದು ಹಂತಕ್ಕೆ ಹೋಗುವ ಅನುಮಾನ ವ್ಯಕ್ತವಾಗಿದೆ.


Spread the love

About Laxminews 24x7

Check Also

ವಿಪಕ್ಷ ಬಿಜೆಪಿಗೆ ಮಗ್ಗಲು ಮುಳ್ಳಾದ ಯತ್ನಾಳ್..ಅಶೋಕ್ ಹೊಸ ಪ್ಲ್ಯಾನ್

Spread the loveಬೆಂಗಳೂರು, (ಡಿಸೆಂಬರ್ 08): ಕಾಂಗ್ರೆಸ್ ಪಡೆಗೆ ಚುಚ್ಚಲು ಬಿಜೆಪಿ ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದೆ. ಮುಡಾ, ವಾಲ್ಮೀಕಿ, ವಕ್ಫ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ