ಮೈಸೂರು, ನವೆಂಬರ್ 30: ಪಕ್ಷದ ವಿರುದ್ಧ ಸದಾ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣದ ಆಕ್ರೋಶ ತೀವ್ರಗೊಂಡಿದೆ. ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಬಿಸಾಕಿ, ಅವರದ್ದು ಮುಖವಾಡದ ಹಿಂದುತ್ವ ಎಂದು ಮೈಸೂರಿನಲ್ಲಿ ಪಕ್ಷದ ಕಾರ್ಯಕರ್ತರು, ವಿಜಯೇಂದ್ರ ಬಣದ ನಾಯಕರು ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿ ಪ್ರತ್ಯೇಕ ಸಮರ ಸಾರಿರುವ ಯತ್ನಾಳ್ ನಡೆಗೆ ವಿಜಯೇಂದ್ರ ಬಣದ ಕಾರ್ಯಕರ್ತರು ಮೈಸೂರಿನಲ್ಲಿ ನಡೆದ ಸಭೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ತಾಳ್ಮೆಯಿಂದ ಇದ್ದ ವಿಜಯೇಂದ್ರ ಬಣದ ಕಾರ್ಯಕರ್ತರು, ಇಂದು ಮೈಸೂರಿನಲ್ಲಿ ಸಭೆಯಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ವಿಜಯೇಂದ್ರ ಬಣದ ನಾಯಕರ ಸುದ್ದಿಗೋಷ್ಠಿ ವೇಳೆ ಕಾರ್ಯಕರ್ತರು ರೋಷಾವೇಶಗೊಂಡಿದ್ದರು. ಭಾರೀ ಹೈಡ್ರಾಮಾವೇ ನಡೆಯಿತು. ಯತ್ನಾಳ್ ಉಚ್ಚಾಟನೆಗೆ ತೀವ್ರ ಆಗ್ರಹ ವ್ಯಕ್ತವಾಯಿತು.
ರಾಜ್ಯಾದ್ಯಂತ ದೇಗುಲಗಳಿಗೆ ಭೇಟಿಯ ನೆಪದಲ್ಲಿ ಪ್ರವಾಸ ಆರಂಭಿಸಿರುವ ವಿಜಯೇಂದ್ರ ಟೀಂ, ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿತು. ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಜತೆಯಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ದೇವಿ ದರ್ಶನದ ಬಳಿಕ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಪಕ್ಷದೊಳಗಿನ ದುಷ್ಟ ಶಕ್ತಿ ಸಂಹಾರ ಆಗುತ್ತದೆ. ಯತ್ನಾಳ್ ಉಚ್ಚಾಟನೆ ಆಗಲಿದೆ, ಕಾದುನೋಡಿ ಎಂದಿದ್ದಾರೆ.
Laxmi News 24×7