ಧಾರವಾಡ, ನವೆಂಬರ್ 29: ಧಾರವಾಡ-ಬೆಳಗಾವಿ (Dharwad-Belagavi) ರಸ್ತೆಯಲ್ಲಿರುವ ಢಾಬಾವೊಂದರಲ್ಲಿ ಅಡುಗೆ ಕಾರ್ಮಿಕನ ಕಾಲಿಗೆ ಚೈನಿಂದ ಕಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆದರೆ ಚೈನಿಂದ ಕಟ್ಟಿಸಿಕೊಂಡಿದ್ದ ಎನ್ನಲಾದ ಕಾರ್ಮಿಕ ಕಿರಣ ಮಾತ್ರ ಪತ್ತೆಯಾಗಿಲ್ಲ. ಆತ ಮಾನಸಿಕ ಅಸ್ವಸ್ಥನಾಗಿದ್ದು, ತಂದೆಯೊಂದಿಗೆ ಇದೇ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಧಾರವಾಡ-ಬೆಳಗಾವಿ ಹೆದ್ದಾರಿ ಪಕ್ಕದ ತೇಗೂರು ಗ್ರಾಮದ ಬಳಿ ಇರುವ ಓಲ್ಡ್ ಮುಲ್ಲಾ ಢಾಬಾ 1975 ರಲ್ಲಿಯೇ ಆರಂಭವಾಗಿದೆ. ಇಲ್ಲಿ ಸುಮಾರು 70 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದೇ ಢಾಬಾದಲ್ಲಿ ಕಳೆದ 20 ವರ್ಷಗಳಿಂದ ಅರುಣ ಕುಮಾರ್ ಎಂಬ ವ್ಯಕ್ತಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಇವರ ಮಗ ಕಿರಣ ಕೂಡ ಇಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಇದೀಗ ಆತನ ಕಾಲಿಗೆ ಸರಪಳಿ ಹಾಕಿ, ದುಡಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರಿಗೆ ದೊರೆತಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿದರು. ಈ ವೇಳೆ ಕಿರಣ ಎಲ್ಲಿಯೂ ಪತ್ತೆಯಾಗಲಿಲ್ಲ. ಆದರೆ ಆತನ ತಂದೆ ಅರುಣಕುಮಾರ್ನನ್ನು ವಿಚಾರಿಸಿದಾಗ, “ಏಳು ವರ್ಷಗಳ ಹಿಂದೆ ಕಿರಣ್ ಅಪಘಾತದಲ್ಲಿ ಗಾಯಗೊಂಡು, ಮಾನಸಿಕ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಎಷ್ಟೋ ದಿನಗಳವರೆಗೆ ಎಲ್ಲೆಲ್ಲಿಯೋ ಹೋಗಿಬಿಡುತ್ತಾನೆ. ಮೂರ್ನಾಲ್ಕು ದಿನ ನಾನು ಕೂಡ ಢಾಬಾದಲ್ಲಿ ಇರಲಿಲ್ಲ. ಈ ವೇಳೆ ಕಾಲಿಗೆ ಚೈನ್ ಹಾಕಿದ್ದರೋ ಏನೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.