ಸಚಿವರ ವಿರುದ್ಧ ಯತ್ನಾಳ್ ಕಿಡಿ
ವಿದ್ಯಾರ್ಥಿ ವಿರುದ್ಧ ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು ಎಂದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ’ ಎಂದು ಕಿಡಿ ಕಾರಿದ್ದಾರೆ.
‘ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಬಾರದು’
ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಯತ್ನಾಳ್ ಬರೆದುಕೊಂಡಿದ್ದಾರೆ.
ಸಚಿವರ ವಿರುದ್ಧ ಯತ್ನಾಳ್ ಕಿಡಿ
ಸಭೆಯಲ್ಲಿ ಸಚಿವರಿಗೆ ಮುಜುಗರ
ವಿಧಾನಸೌಧದಲ್ಲಿ ಬುಧವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರಿಗೆ ಭಾರೀ ಮುಜುಗರವಾಗಿದೆ. ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವಾಗ ವಿದ್ಯರ್ಥಿಯೊಬ್ಬ ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ಹೇಳಿದ್ದಾನೆ.
ಆನ್‌ಲೈನ್ ಮೂಲಕ NEET, CET ಕೋಚಿಂಗ್ ಉದ್ಘಾಟನೆ ವೇಳೆ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿತ್ತು. ಈ ವೇಳೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಮುಜುಗರ ಉಂಟುಮಾಡುವಂತೆ ಮಾಡಿದ್ದು, ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ಸಚಿವರಿಗೆ ಕೇಳುವಂತೆ ಜೋರಾಗಿ ಹೇಳಿದ್ದಾನೆ.
ವಿದ್ಯಾರ್ಥಿ ವಿರುದ್ಧ ಮಧು ಬಂಗಾರಪ್ಪ ಗರಂ
ಸಚಿವರಿಗೆ ಕನ್ನಡ ಬರೋದಿಲ್ಲ ಎಂದು ಹೇಳಿದ ವಿದ್ಯಾರ್ಥಿ ಯಾವ ಕಾಲೇಜಿಗೆ ಸೇರಿದವನು ಎಂಬುದು ತಿಳಿದುಬಂದಿಲ್ಲ. ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ವಿದ್ಯಾರ್ಥಿ ಹೇಳಿದ ತಕ್ಷಣವೇ ಗಲಿಬಿಲಿಗೊಂಡ ಸಚಿವ ಮಧು ಬಂಗಾರಪ್ಪ ಆರಂಭದಲ್ಲಿ ನಕ್ಕರೂ, ನಂತರ ಕೋಪಗೊಂಡರು. ‘ಹೇ ಯಾರೋ ಅವನು ಹಾಗೆ ಮಾತನಾಡೋದು. ಆ ಅವಿವೇಕಿ ಮಾತನ್ನ ಕೇಳಿಸಿಕೊಳ್ಳಬೇಡಿ. ಯಾರು ಅಂದವರು ಡೀಟೇಲ್ಸ್ ತೆಗೆದುಕೊಳ್ಳಿ. ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು ಎಂದ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.