ಮುಂಬೈ/ ರಾಂಚಿ: ಮಹಾರಾಷ್ಟ್ರದ ಎಲ್ಲಾ 288 ಕ್ಷೇತ್ರಗಳಿಗೆ ಹಾಗೂ ಜಾರ್ಖಂಡ್‌ನ 38 ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದ್ದು, ಸೋಮವಾರ ಉಭಯ ರಾಜ್ಯಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಉಭಯ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಂತಹ ಘಟಾನುಘಟಿಗಳು ಪ್ರಚಾರ ನಡೆಸಿದ್ದು, ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ಬಣದ ಎನ್‌ಸಿಪಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದೆ. ಚುನಾವಣೆಯ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಹಾಗೂ ಯೋಗಿ ನೀಡಿರುವ ಘೋಷಣೆಗಳು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ದಟ್ಟವಾಗಿವೆ.
ಮತದಾರರನ್ನು ಸೆಳೆಯಲು ಮಹಾವಿಕಾಸ ಅಘಾಡಿ ಸಹ ಪ್ರಯತ್ನ ಆರಂಭಿಸಿದೆ. ಬಿಜೆಪಿ 149, ಶಿವಸೇನೆ (ಶಿಂಧೆ) 81, ಎನ್‌ಸಿಪಿ (ಅಜಿತ್) 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ 101, ಶಿವಸೇನೆ (ಉದ್ಧವ್) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.