ಬೆಳಗಾವಿ: ‘ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ನಾಲ್ಕು ದಶಕಗಳಾಗಿವೆ. ಅವರ ನಿಷ್ಕಲ್ಮಶ ಸೇವೆ ದಕ್ಷಿಣ ಕರ್ನಾಟಕ ಭಾಗಕ್ಕೂ ಗೊತ್ತಾಗಬೇಕು. ಎಲ್ಲ ಶಾಸಕರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾರಂಭ ಮಾಡಲಾಗುವುದು’ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಗುರುವಾರ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಬಡವರಿಗಾಗಿ ಸರ್ಕಾರಗಳು ಎಷ್ಟು ಕಾಳಜಿ ತೋರುತ್ತವೆಯೋ, ಅಷ್ಟೇ ಕಾಳಜಿ ಕೆಎಲ್‌ಇ ಸಂಸ್ಥೆ ಕೂಡ ತೋರಿದೆ. ಗುಣಮಟ್ಟದ ಶಿಕ್ಷಣ ನೀಡಿ ದೇಶದ ಸಾರ್ವಭೌಮತೆ ಎತ್ತಿಹಿಡಿಯುವಲ್ಲಿ ಪ್ರಭಾಕರ ಕೋರೆ ಪ್ರಮುಖರು’ ಎಂದರು.
‘ಸಪ್ತರ್ಷಿಗಳೆಂದು ಕರೆಯುವ ಏಳು ಶಿಕ್ಷಕರು, ಮೂವರು ದಾನಿಗಳು ಸೇರಿ ಸಂಸ್ಥೆ ಕಟ್ಟಿದರು. ಪ್ರಾಮಾಣಿಕತೆಯಿಂದ ಕೋರೆ ಅವರು ಮುನ್ನಡೆಸಿದರು. ಅವರು ಮುಖ್ಯಮಂತ್ರಿ ಆಗಿದ್ದರೆ ರಾಜ್ಯದ ಶೈಕ್ಷಣಿಕ ಪ್ರಗತಿ ಯಾವ ಮಟ್ಟಕ್ಕೆ ಬೆಳೆಯುತ್ತಿತ್ತು ಎಂಬುದನ್ನು ಅಂದಾಜಿಸಬಹುದು. ಅಂಥವರ ಸಾಧನೆಯನ್ನು ಎಲ್ಲರಿಗೂ ತಿಳಿಸಬೇಕಿದೆ. ಕೇಂದ್ರ ಸರ್ಕಾರದಿಂದಲೇ ಅವರ ಸಾಧನೆ ಗುರುತಿಸಲಾಗುವುದು’ ಎಂದೂ ಹೇಳಿದರು.
Laxmi News 24×7