ಬೆಳಗಾವಿ: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸ್‌ಡಿಎ ರುದ್ರಣ್ಣ ಯಡವನ್ಣವರ ಆತ್ಮಹತ್ಯೆ ಪ್ರಕರಣದಲ್ಲಿ, ತಹಶೀಲ್ದಾರ್ ಸೇರಿದಂತೆ ಮೂವರೂ ಆರೋಪಿಗಳಿಗೆ ಗುರುವಾರ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮು ದೊಡವಾಡಿ ಅವರಿಗೆ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ರುದ್ರಣ್ಣ ನವೆಂಬರ್ 5ರಂದು ತಹಶೀಲ್ದಾರ್ ಕೋಠಡಿಯಲ್ಲೇ ನೇಣಿಗೆ ಶರಣಾಗಿದ್ದರು. ತಮ್ಮ ಸಾವಿಗೆ ಮೂವರು ಹೊಣೆ ಎಂದು ಅವರ ಹೆಸರನ್ನು ವಾಟ್ಸ್‌ಆಯಪ್ ಗ್ರೂಪಿನಲ್ಲಿ ಹಾಕಿದ್ದರು. ಎಫ್‌ಐಆರ್ ದಾಖಲಾದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮೂವರೂ ಪ್ರತ್ಯೇಕ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಶಿರೋಳ ಅವರು ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ್ದಾರೆ.