ಬೆಂಗಳೂರು,ನ.13- ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು ಬಿರುಸಿನಿಂದ ನಡೆದಿದ್ದು, ಎಲ್ಲೆಡೆ ಉತ್ಸಾಹದಿಂದ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.55ಕ್ಕೂ ಹೆಚ್ಚು ಮತದಾನವಾಗಿದ್ದು, ಮತದಾನ ಮುಕ್ತಾಯವಾಗುವ ವೇಳೆಗೆ ಶೇ.70ಕ್ಕೂ ಹೆಚ್ಚು ದಾಖಲೆ ಪ್ರಮಾಣದ ಮತದಾನವಾಗುವ ಸಾಧ್ಯತೆ ಇದೆ.
ಮಧ್ಯಾಹ 2 ಗಂಟೆ ವೇಳೆಗೆ ಚನ್ನಪಟ್ಟಣದಲ್ಲಿ ಸರಾಸರಿ ಶೇ.60, ಶಿಗ್ಗಾವಿಯಲ್ಲಿ ಶೇ.55 ಹಾಗೂ ಸಂಡೂರಿನಲ್ಲಿ ಶೇ.54ರಷ್ಟು ಬಿರುಸಿನ ಮತದಾನವಾಗಿತ್ತು. ಮತದಾರರು ಮತಗಟ್ಟೆಗಳ ಬಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಮೂರು ಕ್ಷೇತ್ರಗಳಲ್ಲೂ ಬಹುತೇಕ ಸಾಮಾನ್ಯವಾಗಿ ಕಂಡುಬಂದಿತು. ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತದಾನ ಮಾಡುತ್ತಿದ್ದರು.
ಶಿಗ್ಗಾವಿ ಕ್ಷೇತ್ರದ ಸವಣೂರಿನ ದಂಡಿನಪೇಟೆಯಲ್ಲಿ ಮತದಾನ ಬಹಿಷ್ಕಾರದಂತಹ ಒಂದೆರಡು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು.ಮತ ಗಟ್ಟೆಗಳಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಮೂರು ವಿಧಾನಸಭಾ ಕ್ಷೇತ್ರಗಳ ಒಟ್ಟು 45 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ಮತದಾನ ಮಾಡುವ ಮೂಲಕ ನಿರ್ಧಾರ ಮಾಡಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು ಫಲಿತಾಂಶಕ್ಕಾಗಿ ನ.23ರವರೆಗೆ ಕಾಯಬೇಕಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಬಸವರಾಜ ಬೊಮಾಯಿ ಅವರ ಪುತ್ರ ಭರತ್ ಬೊಮಾಯಿ, ಸಂಸದ ಇ.ತುಕರಾಂ ಅವರ ಪತ್ನಿ ಇ.ಅನ್ನಪೂರ್ಣ ಹಾಗೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಭವಿಷ್ಯ ಈ ಉಪಚುನಾವಣೆಯಲ್ಲಿ ಅಡಗಿದೆ.