ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ಮಠಾಧೀಶರು ಧರ್ಮ ಪ್ರಸಾರದ ಜತೆಗೆ ದೇಹದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ‘ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಮೌಢ್ಯದಿಂದ ಹೊರಬನ್ನಿ’ ಎಂದು ಕರೆ ಕೊಟ್ಟಿದ್ದಾರೆ.
2017ರಲ್ಲಿ ಇಲ್ಲಿನ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, 2019ರಲ್ಲಿ ರಾಮದುರ್ಗ ತಾಲ್ಲೂಕಿನ ನಾಗನೂರಿನ ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ದೇಹದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.
2011ರಲ್ಲಿ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ನೇತ್ರದಾನ, 2019ರಲ್ಲಿ ನಾಗನೂರಿನ ಬಸವಗೀತಾ ತಾಯಿ ಚರ್ಮ ಮತ್ತು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.
ಇದರಿಂದ ಪ್ರೇರಣೆಗೊಂಡ ಆಯಾ ಮಠಗಳ ಭಕ್ತರೂ ಮರಣಾನಂತರ ತಮ್ಮ ದೇಹ, ನೇತ್ರ ಮತ್ತು ಚರ್ಮ ದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಮೂಲಕ ರಾಜ್ಯದ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದೇಹ ಕಳುಹಿಸಲಾಗುತ್ತಿದೆ.
‘ಇಂದು ಎಷ್ಟೋ ಜನ ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದು ನಾನು ನೇತ್ರದಾನಕ್ಕೆ ವಾಗ್ದಾನ ಮಾಡಿದೆ. ದೇಹ ಮತ್ತು ನೇತ್ರದಾನ ಮಾಡುವಂತೆ ಮಠಕ್ಕೆ ಬರುವ ಭಕ್ತರಿಗೂ ತಿಳಿಸಿದೆ. ಈಗ 300 ಭಕ್ತರು ನೇತ್ರದಾನ, 75 ಭಕ್ತರು ದೇಹದಾನದ ನಿರ್ಧಾರ ಪ್ರಕಟಿಸಿದ್ದಾರೆ. ಈ ಪೈಕಿ ಈಗಾಗಲೇ ಮೃತಪಟ್ಟ 8 ಭಕ್ತರ ದೇಹವನ್ನು ಆಯಾ ಕುಟುಂಬಸ್ಥರು ದಾನ ಮಾಡಿದ್ದಾರೆ’ ಎಂದು ಮುರುಘೇಂದ್ರ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ವೈದ್ಯಕೀಯ ವ್ಯಾಸಂಗ ಮಾಡುವವರಿಗೆ ಮೃತದೇಹಗಳ ಕೊರತೆ ಬಹಳಷ್ಟಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಭಕ್ತರಿಗಷ್ಟೇ ಕರೆಕೊಟ್ಟರೆ ಸಾಲದು. ನಾನೂ ಆ ದಿಸೆಯಲ್ಲಿ ಹೆಜ್ಜೆ ಇರಿಸಬೇಕೆಂದು ಸ್ವತಃ ದೇಹದಾನದ ನಿರ್ಧಾರ ಪ್ರಕಟಿಸಿದ್ದೇನೆ. 200ಕ್ಕೂ ಅಧಿಕ ಭಕ್ತರು ನನ್ನನ್ನೇ ಅನುಸರಿಸಿದ್ದಾರೆ’ ಎನ್ನುತ್ತಾರೆ ಗುರುಸಿದ್ಧ ಸ್ವಾಮೀಜಿ.
ಲೇಖನವೇ ಪ್ರೇರಣೆ: ‘ವ್ಯಕ್ತಿಯೊಬ್ಬರು ನೇತ್ರದಾನ ಮಾಡಿದ್ದರಿಂದ ಕಣ್ಣು ಕಾಣದವರೊಬ್ಬರಿಗೆ ಅನುಕೂಲವಾದ ಸಂಗತಿಯನ್ನು ಮ್ಯಾಗಜೀನ್‌ವೊಂದರಲ್ಲಿ ಪ್ರಕಟವಾದ ಲೇಖನ ಓದಿ ತಿಳಿದೆ. ಅದು ನನ್ನಲ್ಲಿ ಪ್ರೇರಣೆ ತುಂಬಿತು. ಮರಣಾನಂತರ ನನ್ನ ಶರೀರವೂ ಸಮಾಜಕ್ಕೆ ಉಪಯೋಗವಾಗಬೇಕು ಎಂಬ ಆಲೋಚನೆ ಆಗಾಗ ಬರುತ್ತಲೇ ಇತ್ತು. ರಾಮಣ್ಣವರ ಟ್ರಸ್ಟಿನವರು ನನ್ನೆಲ್ಲ ಗೊಂದಲ ಬಗೆಹರಿಸಿದ್ದರಿಂದ ದೇಹದಾನ ಮಾಡುವುದಾಗಿ ತಿಳಿಸಿದೆ’ ಎಂದು ಬಸವಪ್ರಕಾಶ ಸ್ವಾಮೀಜಿ ಹೇಳಿದರು.
2010ರ ನ.13ರಂದು ಕೆಎಲ್‌ಇ ಸಂಸ್ಥೆಯ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಡಾ.ಮಹಾಂತೇಶ ರಾಮಣ್ಣವರ ಅವರು, ತಮ್ಮ ತಂದೆಯ ಮೃತದೇಹವನ್ನೇ ಛೇದಿಸಿ ದಾಖಲೆ ಬರೆದಿದ್ದರು. ಅದಾದ ನಂತರ ಜಿಲ್ಲೆಯಲ್ಲಿ ದೇಹದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ.