ಕಲಬುರಗಿ: ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಜಿಲ್ಲೆಯ ಸಾರ್ವಜನಿಕ ಸೇವಾ ವಾಹನಗಳ ಪೈಕಿ 197 ವಾಹನಗಳಿಗೆ ಮಾತ್ರವೇ ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಮತ್ತು ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಉಪಕರಣ ಅಳವಡಿಕೆಯಾಗಿದೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಡಿವೈಸ್ ಅಳವಡಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸೂಚಿಸಿದ್ದಾರೆ. ಅದರಂತೆ ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿ ಕ್ಯಾಬ್, ಮೋಟರ್ ಕ್ಯಾಬ್ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ನವೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿದೆ.
ಪ್ಯಾನಿಕ್ ಬಟನ್ ಡಿವೈಸ್‌ಗಳಿಗೆ ದುಬಾರಿ ಶುಲ್ಕ ಪಡೆಯಲಾಗುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಲ್ಲಿ ದರ ನಿಗದಿಪಡಿಸಲಾಗಿದೆ. ದುಬಾರಿ ತೆರಿಗೆ, ದುಬಾರಿಯಾದ ಇಂಧನ ದರವು ಚಾಲಕ ಮತ್ತು ಮಾಲೀಕರನ್ನು ಹೈರಾಣಾಗಿಸಿದೆ. ಮಹಿಳೆಯರಿಗೆ ಫ್ರೀ ಬಸ್ ಸೇವೆ ಕಲ್ಪಿಸಿದ್ದರಿಂದಲೂ ಖಾಸಗಿ ವಾಹನಗಳಿಗೆ ಪ್ರಯಾಣಿಕರ ಸಂಖ್ಯೆ ಕ್ಷೀಣವಾಗಿದೆ. ಇಂತಹ ವೇಳೆಯಲ್ಲಿ ಇದರ ಅವಶ್ಯಕತೆಯೇ ಇರಲಿಲ್ಲ ಎನ್ನುವುದು ವಾಹನಗಳ ಚಾಲಕರ ಮತ್ತು ಮಾಲೀಕರ ವಾದ.
‘ಬಹುತೇಕ ಪ್ರಯಾಣಿಕರು ಸಾರ್ವಜನಿಕ ಸೇವಾ ವಾಹನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರಯಾಣದ ವೇಳೆ ಯಾವುದಾದರೂ ಅವಘಡ ಸಂಭವಿಸಿದರೆ, ತುರ್ತು ಸೇವೆ ಅಗತ್ಯವಾದರೆ, ದಾಳಿಗಳು ನಡೆದರೆ ಅಂತಹ ಸಂಕಷ್ಟದಲ್ಲಿ ಪ್ರಯಾಣಿಕರ ರಕ್ಷಣೆಗೆ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಸಹಾಯಕ್ಕೆ ಬರಲಿವೆ. ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜಗಳ ಉಂಟಾದರೆ, ಪ್ರಯಾಣಿಕರೇ ತಮ್ಮ ನಡುವೆ ಗಲಾಟೆ ಮಾಡಿಕೊಂಡರೂ ತಪಿತಸ್ಥರ ಪತ್ತೆಗೂ ನೆರವಾಗುತ್ತದೆ’ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.
‘ಪ್ರಯಾಣಿಕ ಸೇವಾ ವಾಹನಗಳಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಇತರೆ ಪ್ರಯಾಣಿಕರಿಗೆ ತೊಂದರೆಯಾಗಿ ಪ್ಯಾನಿಕ್ ಬಟನ್ ಒತ್ತಿದರೆ ಅದರ ಸಂಕೇತವು ಇಲಾಖೆಯ ನಿಯಂತ್ರಣ ಕೊಠಡಿಗೆ ಹೋಗುತ್ತದೆ. ಇದರಿಂದ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಸುಲಭವಾಗುತ್ತದೆ. ಜತೆಗೆ ವಾಹನ ಹಾದುಹೋಗುವ ಮಾರ್ಗ, ಅಪಘಾತವಾದ ಸ್ಥಳ, ವೇಗದ ವಿವರ, ಅನಧಿಕೃತ ಮಾರ್ಗದಲ್ಲಿ ಚಲಾಯಿಸಿದೆಯಾ ಅಥವಾ ಇಲ್ಲವಾ ಎಂಬೆಲ್ಲ ಮಾಹಿತಿಯೂ ಲಭ್ಯವಾಗಲಿದೆ’ ಎಂದು ಹೇಳುತ್ತಾರೆ.
Laxmi News 24×7