ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು “ಕರಿಯ’ ಎಂದು ಕರೆದಿದ್ದ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ರಾಜ್ಯದ ಹಲವೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ, ಸಚಿವ ಜಮೀರ್ ಅಹ್ಮದ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾ.ರಾ. ಮಹೇಶ್ ಮಾತನಾಡಿ, ಜಮೀರ್ ಹೇಳಿಕೆ ಖಂಡನಾರ್ಹ. ಈ ಕೂಡಲೇ ರಾಜೀನಾಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಗರದಲ್ಲಿ ಆಯೋಜಿಸಿದ್ದ ವಕ್ಫ್ ಸಭೆಯಲ್ಲಿ ಜಮೀರ್ ಅಹ್ಮದ್ ಪಾಲ್ಗೊಂಡಿದ್ದಾರೆಂದು ತಿಳಿದು ಧರಣಿ ಮುಗಿದ ಬಳಿಕ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ ತಮ್ಮ ಹೇಳಿಕೆಗೆ ಜಮೀರ್ ಕ್ಷಮೆ ಕೋರಿದ್ದರಿಂದ ಮುತ್ತಿಗೆಯನ್ನು ಕೈ ಬಿಟ್ಟರು.
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲೆ ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಂಜನಗೂಡಿನಲ್ಲೂ ಜಮೀರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7