ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿ.ಎಂ. ಇಬ್ರಾಹಿಂ ವಕ್ಫ್ ಆಸ್ತಿ ತಿಂದಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಈಗಾಗಲೇ ವಕೀಲರ ಮೂಲಕ ನೋಟಿಸ್ ಕೊಟ್ಟು 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯತ್ನಾಳ್ ಅವರೇ ನಾನು ಯಾವ ಊರಿನಲ್ಲಿ ವಕ್ಫ್ ಆಸ್ತಿ ತಿಂದಿದ್ದೀನಿ? ಎಷ್ಟು ಆಸ್ತಿ? ಸರ್ವೇ ನಂಬರ್ ಏನು? ಖಾತಾ ಸಂಖ್ಯೆ ಏನು ಎಂಬುದನ್ನು ಜನರ ಮುಂದೆ ಬಹಿರಂಗಪಡಿಸಿ. ಇಲ್ಲವಾದರೆ ನೀವು ಹೇಳಿರುವುದು ತಪ್ಪು ಎಂದು ಕ್ಷಮೆ ಕೇಳಿ ಅಥವಾ ಕೋರ್ಟ್‌ಗೆ ಬಂದು ಉತ್ತರ ಹೇಳಿ. ಅಲ್ಲದೇ ಯತ್ನಾಳ್ ರಾತ್ರಿ ಹೊತ್ತು ಮುಸ್ಲಿಮರ ಮನೆಯಲ್ಲಿ ಊಟ ಮಾಡಿ ಬೆಳಗ್ಗೆ ಅದೇ ಮುಸ್ಲಿಮರಿಗೆ ಬೈಯುತ್ತೀರಿ ಎಂದರು.
ಭಾಷಣಕ್ಕೆ ಅಡ್ಡಿ: ಅರ್ಧಕ್ಕೆ ತೆರಳಿದ ಯತ್ನಾಳ್!
ಬಾಗಲಕೋಟೆ: ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ತೆರಳಿದ ಪ್ರಸಂಗ ಸೋಮವಾರ ನಡೆದಿದೆ. ಯತ್ನಾಳ್ ಭಾಷಣ ಮಾಡುತ್ತಿದ್ದ ವೇಳೆ ವಕ್ಫ್ ವಿಷಯ ಪ್ರಸ್ತಾವಿಸಿದರು. ವೇದಿಕೆ ಮುಂಭಾಗ ಕುಳಿತಿದ್ದ ಕೆಲವರು, ಇದು ರಾಜಕೀಯ ವಿಷಯ ಮಾತನಾಡುವ ವೇದಿಕೆಯಲ್ಲ ಎಂದು ಕೂಗಿದರು.
ಅಸಮಾಧಾನಗೊಂಡ ಯತ್ನಾಳ್, ವಕ್ಫ್ ವಿಷಯ ಮಾತಾಡಿದರೆ ಅದು ರಾಜಕೀಯವೇ ಎಂದು ಮರು ಪ್ರಶ್ನಿಸಿದರು. ಆಗ ಸಭಿಕರು ಪುನಃ ಅದೇ ಮಾತು ಹೇಳಿ, ರಾಜಕೀಯ ಮಾತಾಡಬೇಡಿ ಎಂದರು. ಅಸಮಾಧಾನಗೊಂಡ ಯತ್ನಾಳ್ ಮಾತು ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು.