ಹುಬ್ಬಳ್ಳಿ: ‘ರಾಜ್ಯ ಸರ್ಕಾರ ವಕ್ಫ್ ಹೆಸರಲ್ಲಿ ರೈತರ ಜಮೀನನ್ನು ಕಬಳಿಸುತ್ತಿದ್ದು, ತಕ್ಷಣ ವಕ್ಫ್ ಹೆಸರು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಸೋಮವಾರ ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದರು.
ಬೈರಿದೇವರಕೊಪ್ಪದ ಶಿವಾನಂದ ಮಠದ ಎದುರು, ವಿದ್ಯಾನಗರದ ಕೋತಂಬ್ರಿ ಕಾಲೇಜು ಎದುರು, ಗೋಕುಲ ರಸ್ತೆ ಅಕ್ಷಯ ಪಾರ್ಕ್ ವೃತ್ತ, ಹಳೇಹುಬ್ಬಳ್ಳಿ ಇಂಡಿಪಂಪ್ ವೃತ್ತ, ಬಂಕಾಪುರ ಚೌಕ, ಗದಗ ರಸ್ತೆಯ ರಲ್ವೆ ಬ್ರಿಡ್ಜ್ ಮತ್ತು ಕೇಶ್ವಾಪುರದ ಸರ್ವೋದಯ ವೃತ್ತದ ಬಳಿ ‘ನಮ್ಮ ಆಸ್ತಿ-ನಮ್ಮ ಹಕ್ಕು’ ಹೆಸರಲ್ಲಿ ವಾಹನಗಳ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ನಗರದಾದ್ಯಂತ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು.
ಹಳೇಹುಬ್ಬಳ್ಳಿ ಇಂಡಿಪಂಪ್ ವೃತ್ತದ ಬಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಅದಕ್ಕೂ ಪೂರ್ವ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ಸಹ ನಡೆಯಿತು.