ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನಗರದಲ್ಲಿ ನ.1ರಂದು ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ 46 ನಾಯಕರು ಸೇರಿ ಹಲವರ ವಿರುದ್ಧ ಇಲ್ಲಿನ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯೋತ್ಸವ ದಿನದಂದೇ ಎಂಇಎಸ್‌ನವರು ಪ್ರತಿವರ್ಷ ಕರಾಳ ದಿನ ಆಚರಿಸುತ್ತಾರೆ.
ಈ ಬಾರಿ ಅದಕ್ಕೆ ಅನುಮತಿ ಕೋರಿ ಬಂದಿದ್ದ ಎಂಇಎಸ್ ನಿಯೋಗಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಯಾವ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ಕೊಡುವುದಿಲ್ಲ’ ಎಂದು ತಿಳಿಸಿದ್ದರು.
ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರೂ, ನಾಡವಿರೋಧಿ ಚಟುವಟಿಕೆಗಾಗಿ ಎಂಇಎಸ್‌ಗೆ ಅನುಮತಿ ಕೊಡುವುದಿಲ್ಲ ಎಂದಿದ್ದರು. ಆದರೆ, ಅನುಮತಿ ಸಿಗದಿದ್ದರೂ ಎಂಇಎಸ್‌ನವರು ಕರಾಳ ದಿನ ಆಚರಿಸಿ ಉದ್ಧಟತನ ಮೆರೆದಿದ್ದರು.
‘ಅನುಮತಿ ನೀಡದಿದ್ದರೂ ಎಂಇಎಸ್‌ನವರು ಕಪ್ಪು ಬಟ್ಟೆ ಧರಿಸಿ, ಬೈಕ್ ರ್‍ಯಾಲಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದರು.
‘ಎಂಇಎಸ್‌ನ 46 ನಾಯಕರು ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆದಿದೆ’ ಎಂದು ನಗರ ಪೊಲೀಸ್ ಉಪ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ರೋಹನ್ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೊಂಬಿಗೆ ಪ್ರಚೋದನೆ, ನಿಯಮ ಬಾಹಿರವಾಗಿ ಗುಂಪಾಗಿ ಸೇರಿರುವುದು, ಸಂಚಾರಕ್ಕೆ ಅಡ್ಡಿಪಡಿಸಿರುವುದು ಮತ್ತಿತರ ಆರೋಪಗಳಡಿ ಎಂಇಎಸ್ ನಾಯಕರ ವಿರುದ್ಧ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಮಾರ್ಕೆಟ್ ಠಾಣೆ ಪೊಲೀಸರು ಹೇಳಿದರು.