ಬೈಲಹೊಂಗಲ (ದೊಡ್ಡಬಾವೆಪ್ಪ ವೇದಿಕೆ): ‘ಪ್ರತಿ ವರ್ಷ ಬೈಲಹೊಂಗಲದಲ್ಲಿ ಉತ್ಸವ ನಡೆಯಬೇಕು. ಚನ್ನಮ್ಮನ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡಲು ಸರ್ಕಾರಗಳು ಶ್ರಮಿಸಬೇಕು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಲ್ಲಿ ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಸೋಮವಾರ ನಡೆದ ಬೈಲಹೊಂಗಲ ಉತ್ಸವ-2024ರ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಕಿತ್ತೂರು ಚನ್ನಮ್ಮ ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳದೆ ಅವರ ವಿರುದ್ಧ ಹೋರಾಡಿದರು. ಅವರ ದೇಶ ಪ್ರೇಮ, ನಿಷ್ಠೆ, ತ್ಯಾಗ, ಬಲಿದಾನ, ಶೌರ್ಯ- ಸಾಹಸದ ಪ್ರತೀಕವಾಗಿ ಪ್ರೇರಣೆಗೊಂಡು ಸ್ವಾತಂತ್ರ್ಯ ಸಿಕ್ಕಿದೆ’ ಎಂದರು.
ಶಾಸಕ ಮಹಾಂತೇಶ ಕೌಜಲಗಿ, ‘ರಾಜ್ಯದಾದ್ಯಂತ ಸಂಭ್ರಮದಿಂದ ಚನ್ನಮ್ಮನ 200ನೇ ವಿಜಯೋತ್ಸವ ಆಚರಿಸುತ್ತಿದ್ದೇವೆ. ನಾಡಿನ ಜನರ ಬಯಕೆಯಂತೆ ಬೈಲಹೊಂಗಲದಲ್ಲಿಯೂ ವಿಜಯೋತ್ಸವ ಆಚರಿಸಿದ್ದೇವೆ. ಯುವ ಪೀಳಿಗೆಗೆ ಇತಿಹಾಸ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಚನ್ನಮ್ಮನ ಸಮಾಧಿ ಸಂಪೂರ್ಣ ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಈಗಾಗಲೇ ₹3 ಕೋಟಿ ವೆಚ್ಚದಲ್ಲಿ ಚನ್ನಮ್ಮನ ಹುಟ್ಟಿನಿಂದ, ಬಲಿದಾನದವರೆಗೆ ಇತಿಹಾಸ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.