ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗಿದ್ದು, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೂ ಈ ಬಾರಿ ದೀಪಾವಳಿ ಸಂಭ್ರಮ ಕಳೆಗಟ್ಟಲಿದೆ.
ಹಬ್ಬದ ಪ್ರಯುಕ್ತ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ಬರೋಬ್ಬರಿ 28 ಲಕ್ಷ ಪರಿಸರ ಸ್ನೇಹಿ ಹಣತೆಗಳಲ್ಲಿ ದೀಪ ಹಚ್ಚುವ ಮೂಲಕ ಹೊಸ ದಾಖಲೆ ಬರೆಯುವ ಗುರಿಯನ್ನು ಹೊಂದಿದೆ.
ವಿಶೇಷ ಎಂದರೆ, ರಾಮಮಂದಿರದಲ್ಲಿ ದೀಪದ ಎಣ್ಣೆಯ ಕಲೆ ಹಾಗೂ ಮಸಿ ಬೀಳದಂತೆ ಪರಿಸರ ಸ್ನೇಹಿ ಮೇಣದ ದೀಪಗಳನ್ನು ಬಳಸಲಾಗಿದೆ. ಜೊತೆಗೆ ದೇವಸ್ಥಾನಕ್ಕೆ ಹಲವರು ರೀತಿಯ ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ ಎಂದು ಯುಪಿ ಸರ್ಕಾರ ತಿಳಿಸಿದೆ.
ವಿಶೇಷ ಮೇಣದ ದೀಪಗಳು ಇಂಗಾಲ ದ ಡೈ ಆಕ್ಸೈಡ್ ಅನ್ನು ಕಡಿಮೆ ಪ್ರಮಾಣದಲ್ಲಿ ಹೊರಸೂಸುವುದರಿಂದ ಅದನ್ನು ಬಳಸಲಾಗಿದ್ದು, ಈ ಬಾರಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ನು ದೀಪಾವಳಿಯ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಹಿನ್ನಲೆ ಅ.29 ರಿಂದ ನ.1 ರ ವರೆಗೆ ಮಧ್ಯರಾತ್ರಿಯ ವರೆಗೆ ತೆರೆದಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.