ಕಿತ್ತೂರು): ಇಲ್ಲಿನ ಕೋಟೆ ಆವರಣದಲ್ಲಿನ ವೇದಿಕೆಯಲ್ಲಿ ಕಿತ್ತೂರು ಉತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಆಯೋಜಿಸಿದ್ದ ಭಜನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಲಾವಿದರೊಬ್ಬರು ಹಾಡು ಮುಗಿಸಿ ಕೆಳಗೆ ಇಳಿಯುತ್ತಿದ್ದಾಗ ತೀವ್ರ ಹೃದಯಾಘಾತದಿಂದ ನಿಧನರಾದರು.
ತಾಲ್ಲೂಕಿನ ಬಸಾಪುರ-ಶೀಗಿಹಳ್ಳಿಯ ಭಜನಾ ತಂಡದ ಸದಸ್ಯ ಈರಪ್ಪ ಫಕ್ಕೀರಪ್ಪ ಬಬ್ಲಿ(48) ಮೃತರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
‘ತಂಡದ ಸದಸ್ಯರೊಂದಿಗೆ ಭಾಗಿಯಾಗಿದ್ದ ಅವರು, ಹಾಡು ಮುಗಿದ ನಂತರ ಕೈಯಲ್ಲಿ ಹಿಡಿದಿದ್ದ ತಾಳದೊಂದಿಗೆ ಇಳಿಯುತ್ತಿದ್ದಾಗ ಕುಸಿದು ಬಿದ್ದರು. ಅಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.