ರಾಯಚೂರು: ರಾಜ್ಯದಲ್ಲಿ ಶೇಕಡ 80 ರಷ್ಟು ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಗ್ರಾಮಸ್ವರಾಜ್ಯ ಸಮಾವೇಶ ನಡೆಸಿದ್ದೇವೆ ಅಂತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸವದಿ ಉಪಚುನಾವಣೆಯ ದೃಷ್ಠಿಕೋನದಲ್ಲಿ ಇಂದು ಮಸ್ಕಿಯಲ್ಲಿ ಸಮಾವೇಶ ಮಾಡಿದ್ದೇವೆ ಎಂದರು.
ಸಿದ್ದರಾಮಯ್ಯ ಆಧಾರ ರಹಿತವಾಗಿ ಮಾತನಾಡುತ್ತಾರೆ. ಆದ್ರೆ ಮೋದಿ ಯಾವುದನ್ನು ಹೇಳುತ್ತಾರೊ ಅದನ್ನೇ ಮಾಡುತ್ತಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದಾರೆ. ಮಸ್ಕಿ ಉಪಚುನಾವಣೆಗೂ ಮುನ್ನ ನೀರಾವರಿಯ ಎಲ್ಲಾ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. 5 ಎ ಕಾಲುವೆ ಹೋರಾಟಗಾರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಇಂದು ಅಥವಾ ನಾಳೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿಯು ಕಾರ್ಯಕರ್ತರಿಗೋಸ್ಕರ ನಾಯಕರನ್ನು ಬಳಸಿಕೊಳ್ಳುತ್ತಿದೆ. ಹಳ್ಳಿಯಲ್ಲಿರುವ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು. ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯಿಂದ ಗ್ರಾಮಸ್ವರಾಜ್ ಸಮಾವೇಶ ಮಾಡುತ್ತಿದ್ದೇವೆ. ಕಾರ್ಯಕರ್ತರ ಋಣ ನಮ್ಮ ಮೇಲಿದೆ, ಅದನ್ನು ತೀರಿಸಬೇಕಾಗಿದೆ ಎಂದರು.

ಡಿಸೆಂಬರ್ ಒಂದರಿಂದ ಭತ್ತ ಖರೀದಿ ಆರಂಭವಾಗುತ್ತದೆ. 50 ಕಾಲುವೆಯ ಚಾಲನೆಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಪೂರಕ ತೀರ್ಮಾನ ತಗೆದುಕೊಳ್ಳಬೇಕಿದೆ. ಮಸ್ಕಿಯ ಬುದ್ದಿನ್ನಿ ಗ್ರಾಮದ ಶಾಲೆಗೆ ಉನ್ನತೀಕರಣ ಮಾಡಲಾಗುವುದು. ಮಸ್ಕಿ ಕ್ಷೇತ್ರದ 15 ಕೆರೆಗೆ ನೀರು ತುಂಬಿಸುವ ಕೆಲಸವಾಗಲು ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ರಾಮ (ಶ್ರೀರಾಮುಲು) ಲಕ್ಷ್ಮಣ( ಸವದಿ) ನಾವೆಲ್ಲ ಸೇರಿ ಮಸ್ಕಿ ಚುನಾವಣೆಯಲ್ಲಿ ಪ್ರತಾಪಗೌಡರನ್ನ ಗೆಲ್ಲಿಸುತ್ತೇವೆ, ಅವರು ಮಂತ್ರಿಯಾಗುತ್ತಾರೆ. ಬಸನಗೌಡ ತುರವಿಹಾಳ ಕಾಂಗ್ರೆಸ್ ಹೋಗಿದ್ದಾರೆ ಅಲ್ಲಿ ಏನು ಆಗುವುದಿಲ್ಲ, ಮತ್ತೆ ಅವರು ಮರಳಿ ಬರಲಿ ಎಂದರು.