ಬೆಂಗಳೂರು: ಡಿಬಿಟಿ ಪ್ರಾರಂಭವಾದ 2023ರ ಜುಲೈಯಿಂದ 2024ರ ಜುಲೈವರೆಗೆ 8433.11 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ. ಕೊಡುತ್ತಿದ್ದೇವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ ಇದೆ. ಶೀಘ್ರವೇ ಹಣ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಸರ್ವರ್ ಸಮಸ್ಯೆ ಇದೆ, ಇಂದಿನಿಂದ ಆ ಸಮಸ್ಯೆ ಇರುವುದಿಲ್ಲ. ಪ್ರಸ್ತುತ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ DBT ನೀಡುತ್ತಿರುವುದನ್ನು ಮುಂದುವರೆಸಲಾಗುತ್ತದೆ. ಪಡಿತರ ಚೀಟಿ ಪರಿಷ್ಕರಣೆ ಬಳಿಕ ಮುಂದೆ ಹಣದ ಬದಲು ಅಕ್ಕಿ ಕೊಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಪಡಿತರ ಚೀಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಮುನಿಯಪ್ಪ, ಕಳೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಚರ್ಚೆ ನಡೆದಿಲ್ಲ. “ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಡಿಬಿಟಿ ಬದಲಿಗೆ ಅಡುಗೆ ಎಣ್ಣೆ, ಬೇಳೆ ಮತ್ತು ಸಕ್ಕರೆ ಹೊಂದಿರುವ ಆಹಾರ ಕಿಟ್‌ಗಳನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್ 28ರ ಸಚಿವ ಸಂಪುಟ ಸಭೆಯಲ್ಲಿ ಆಹಾರ ಕಿಟ್ ವಿತರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಪಡಿತರ ಚೀಟಿಗಳ ಪರಿಷ್ಕರಣೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು, ಇದು ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಅನ್ನಭಾಗ್ಯ ಯೋಜನೆಗೆ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ್ದ ಕೇಂದ್ರ ಇತ್ತೀಚೆಗೆ ಕೆಜಿಗೆ 28 ರೂ.ಗೆ ಅಕ್ಕಿ ನೀಡಲು ಮುಂದಾಗಿದೆ ಎಂದರು. ರಾಜ್ಯಕ್ಕೆ ಪ್ರತಿ ತಿಂಗಳು 20,000 ಟನ್ ಅಕ್ಕಿ ಅಗತ್ಯವಿರುವುದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.