ಸವದತ್ತಿ: ನಿರಂತರ ನೀರು (24X7) ಪೂರೈಕೆಗಾಗಿ ಪಟ್ಟಣದ ಬಹುಪಾಲು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಕಾಮಗಾರಿ ಮುಗಿದ ಮೇಲೆ ಮತ್ತೆ ರಸ್ತೆ ದುರಸ್ತಿ ಮಾಡಿಲ್ಲ. ಇದೇ ಪರಿಸ್ಥಿತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ತಲೆದೋರಿದೆ. ಕೊರಕಲು ರಸ್ತೆಗಳಿಂದ ಜನ ಬೇಸತ್ತುಹೋಗಿದ್ದಾರೆ.
ಅಧಿಕಾರಿಗಳು ಮಾತ್ರ ಒಬ್ಬರ ಮೇಲೊಬ್ಬರ ನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ.
ಸುಪ್ರಸಿದ್ಧ ಪ್ರೇಕ್ಷಣೀಯ ಸ್ಥಾನ ಯಲ್ಲಮ್ಮನ ಗುಡ್ಡವನ್ನು ಸುತ್ತವರಿದು ಸವದತ್ತಿ ಪಟ್ಟಣ ಹಾಗೂ ಗ್ರಾಮಗಳಿವೆ. ವಿಶಾಲವಾಗಿ ಹರಿದ ಮಲಪ್ರಭೆಯಿಂದ ಸಾಕಷ್ಟು ನೀರಿನ ಲಭ್ಯತೆ ಇದೆ. ನವಿಲುತೀರ್ಥ ಜಲಾಶಯ ಈ ಭಾಗದ ಜೀವನಾಡಿಯಾಗಿದೆ. ಈ ಸಮೃದ್ಧ ಜಲ ಬಳಸಿಕೊಂಡು ದಿನವಿಡೀ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಬೇಕು ಎಂದು ದಶಕಗಳಿಂದಲೂ ಜನ ಹೋರಾಟ ಮಾಡಿದ್ದರು. ಮಗ್ಗುಲಲ್ಲೇ ನದಿ ಹರಿದರೂ, ಅಣೆಕಟ್ಟೆ ಇದ್ದರೂ ಜನರಿಗೆ ಕುಡಿಯುವ ನೀರಿನ ಬರ ತಪ್ಪಿರಲಿಲ್ಲ.
ಅತಿ ವಿಳಂಬವಾಗಿಯಾದರೂ ನಿರಂತರ ನೀರು ಯೋಜನೆ ಅನುಷ್ಠಾನ ಮಾಡಲಾಗಿದೆ. ಈಗಲಾದರೂ ಸಮಸ್ಯೆ ನೀಗಿತಲ್ಲ ಎಂದು ಜನ ನಿಟ್ಟಿಸಿರು ಬಿಟ್ಟಿದ್ದರು. ಆದರೆ, ಈಗ ಒಂದು ಪೀಡೆ ಹೋಗಿ ಮತ್ತೊಂದು ಪೀಡೆ ಬಂದಂತಾಗಿದೆ. ನೀರಿನ ಪೈಪ್‌ಲೈನ್ ಕಾಮಗಾರಿಗೆ, ನಳ ಜೋಡಣೆಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಡಾಂಬರು ರಸ್ತೆ, ಸಿಮೆಂಟ್ ರಸ್ತೆಗಳನ್ನೂ ಕೀಳಲಾಗಿದೆ. ಕಾಮಗಾರಿ ಮುಗಿದ ಬಳಿಕ ರಸ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ.