ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಉಭಯ ಪಕ್ಷಗಳ ತಯಾರಿ ಗರಿಗೆದರಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ನಿನ್ನೆ ದೆಹಲಿಗೆ ತೆರಳಿ ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆಗೆ ಮಹತ್ವದ ಚರ್ಚೆ ನಡೆಸಿ ಬಂದಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಗೆ ಒಳ್ಳೆಯ ಸುದ್ದಿಯನ್ನೇ ಕೊಡುತ್ತೇವೆ ಎಂದು ಸುಳಿವು ನೀಡಿದ್ದಾರೆ.
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದೆವು. ನಮ್ಮ ಮಹಾಯುತಿಯ (ಮೈತ್ರಿಕೂಟ) ಸೀಟು ಹಂಚಿಕೆ ಕುರಿತು ಸಕಾರಾತ್ಮಕ ಚರ್ಚೆಗಳೇ ನಡೆದವು. ಚರ್ಚೆಗಳು ಎಲ್ಲವೂ ಅಂತಿಮ ಹಂತದಲ್ಲಿವೆ. ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಿ ಜನರಿಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಭಾರಿ ಬಹುಮತ ಪಡೆಯಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹರಿಯಾಣದಲ್ಲಿ ಇತ್ತೀಚೆಗೆ ಆದ ಬಿಜೆಪಿ ಗೆಲುವನ್ನು ಮಹಾರಾಷ್ಟ್ರದ ಪೂರಕವಾದ ಸಂಕೇತ ಎಂದೂ ಶಿಂಧೆ ಕರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೈತ್ರಿಕೂಟದ ಸೀಟು ಹಂಚಿಕೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
Laxmi News 24×7