ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ರಾಜಾತಿಥ್ಯ ಹಾಗೂ ಹನಿಟ್ರ್ಯಾಪ್ ದಂತಹ ಪ್ರಕರಣಗಳು ಜತೆಗೆ ಕೈದಿಗಳ ಹೊಡೆದಾಟದ ಹಿನ್ನೆಲೆಯಲ್ಲಿ ಇಬ್ಬರು ಜೈಲಾಧಿಕಾರಿಗಳು ಅಮಾನತ್ತುಗೊಂಡಿದ್ದಾರೆ.
ಕಲಬುರಗಿ ಸೆಂಟ್ರಲ್ ಜೈಲಿನ ಇಬ್ಬರು ಜೈಲರ್ ಗಳಾದ ಸೈನಾಜ್ ನೀಗೆವಾನ್ ಮತ್ತು ಪಾಂಡುರಂಗ ಹರವಾಳ ಎನ್ನುವರು ಅಮಾನತ್ತುಗೊಂಡಿದ್ದಾರೆ.
ಕರ್ತವ್ಯ ಲೋಪದಡಿ ಅಮಾನತು ಮಾಡಿ ಶನಿವಾರ (ಅ.19) ಆದೇಶ ಹೊರಡಿಸಲಾಗಿದೆ.
ಅಮಾನತ್ತು ಮಾಹಿತಿಯನ್ನು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕಿ ಡಾ.ಅನಿತಾ ಆರ್. ನೀಡಿದ್ದಾರೆ.
ಕಾರಾಗೃಹದಲ್ಲಿ ಮೊಬೈಲ್ ಬಳಕೆ ಹಾಗೂ ಐಷಾರಾಮಿ ಜೀವನ ಬಗ್ಗೆ ಜತೆಗೆ ಹನಿಟ್ಯ್ರಾಪ್ ಕುರಿತಾದ ವರದಿಗಳು ಪ್ರಕಟವಾದ ನಂತರ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದರು. ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಯಂತೆ ಇಬ್ಬರು ಜೈಲಾಧಿಕಾರಿಗಳ ತಲೆದಂಡವಾಗಿದೆ.