ಚಿಕ್ಕೋಡಿ: ತಾಲ್ಲೂಕು ವ್ಯಾಪ್ತಿಯ ಕೊಟಬಾಗಿ ಏತ ನೀರಾವರಿಯ ಘಟಪ್ರಭಾ ಬಲದಂಡೆಯ 2ನೇ ಹಂತದ ವಿತರಣಾ ಕಾಲುವೆ, ಉಪ ಕಾಲುವೆಗಳಲ್ಲಿ ಹೂಳು ಭರ್ತಿಯಾಗಿ, ಗಿಡಗಂಟಿಗಳು ಬೆಳೆದಿವೆ.
ಕೆಲವೊಂದು ಕಡೆಗೆ ಕಾಲುವೆಗೆ ಹಾಕಿದ ಸಿಮೆಂಟ್ ಕಿತ್ತು ಹೋಗಿದೆ. ಇನ್ನು ಕೆಲವು ಕಡೆಗೆ 10 ಅಡಿಯಷ್ಟು ಆಳದ ಕಾಲುವೆಯಲ್ಲಿ 8 ಅಡಿಯಷ್ಟು ಹೂಳು ತುಂಬಿದ್ದು, ನೀರಾವರಿ ಇಲಾಖೆಯ ನಿರ್ಲಕ್ಷ್ಯ ಹಿಡಿದ ಕೈಗನ್ನಡಿಯಾಗಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗಬೇಕಿರುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯುಸೆಕ್ ನೀರು ಹರಿಯಬೇಕಿತ್ತು. ಕಾಲುವೆಯಲ್ಲಿ ಕಳೆದ ಹಲವು ವರ್ಷಗಳಿಂದ ಹೂಳು ತುಂಬಿದ್ದರಿಂದ ಕಾಲುವೆಯು ನೀರನ್ನೇ ಕಂಡಿಲ್ಲ. ಹೀಗಾಗಿ 5375.88 ಹೆಕ್ಟೇರ್ ಪ್ರದೇಶ ವ್ಯಾಪ್ತಿಗೆ ಹರಿಯಬೇಕಿದ್ದ ನೀರು ಹರಿಯುತ್ತಿಲೇ ಇಲ್ಲ. ಕಾಲುವೆಗೆ ನೀರು ಹರಿಸಿದರೂ ಅದು ಕೊನೆಭಾಗಕ್ಕೆ ತಲುಪುವುದೇ ಇಲ್ಲ.
ಕಾಲುವೆ ವ್ಯಾಪ್ತಿಯ ಕರಗಾಂವ, ಬೆಳಕೂಡ, ಡೋಣವಾಡ, ಬಂಬಲವಾಡ, ಹಂಚಿನಾಳ, ವಿದ್ಯಾನಗರ, ಬೆಳಗಲಿ ಮತ್ತಿತರ ಗ್ರಾಮಗಳ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ವಿತರಣಾ ಕಾಲುವೆಯಲ್ಲಂತೂ ಆಳೆತ್ತರದ ಹುಲ್ಲು ಬೆಳೆದು ನಿಂತಿದೆ. ಕೆಲವು ಕಡೆಗೆ ಗಿಡ ಗಂಟಿಗಳು ಬೆಳೆದಿವೆ. ಕಾಲುವೆಯ ಕಬ್ಬಿಣದ ಗೇಟ್ ಕಿತ್ತು ಹೋಗಿವೆ. ಕೆಲವು ಕಡೆಗೆ ಕಾಲುವೆಗೆ ರಂಧ್ರ ಕೊರೆದು ತಮ್ಮ ಹೊಲಕ್ಕೆ ನೀರು ತೆಗೆದುಕೊಂಡು ಹೋಗಿದ್ದನ್ನು ಕಾಣಬಹುದಾಗಿದೆ.