ಮೈಸೂರು, ಅ.14- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಪ್ರಚೋದನೆ ನೀಡುವ ಕೃತ್ಯದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳ ಪಡಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸ್ ಅಧ್ಯಕ್ಷಕರಿಗೆ ದೂರು ನೀಡಿದ್ದಾರೆ.
ದಸರಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೀಡಲಾದ ಜಾಹೀರಾತುವಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಹಾಗೂ ಪ್ರಚೋದನೆ ನೀಡಲು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿದ್ದಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯವನ್ನು ವಾಮಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ದೇವಿಯು ನಿಗ್ರಹಿಸಿ ನಾಡಿನ ಜನತೆಗೆ ಸುಖ, ಶಾಂತಿ ಮತ್ತು ನೆಮ್ಮದಿ ಕರುಣಿಸಲಿ ಎಂದು ಉಲ್ಲೇಖಿಸಲು ಕಾರಣಗಳೇನು? ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವಾಗ ಲಗತ್ತಿಸಿರುವ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿದ್ದು, ಅದರಲ್ಲಿನ ಪ್ರತಿಯೊಂದು ವಿಚಾರಗಳನ್ನೂ ವಿಸ್ತರಿತವಾಗಿ ವಿವರಿಸಿದ್ದಾರೆ.