ಪ್ರಿಯಕರನ ಜತೆ ಸೇರಿ ಇಬ್ಬರು ಎಳೆಯ ಮಕ್ಕಳನ್ನೇ ಕೊಂದ ತಾಯಿ!
ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಪ್ರಿಯಕರನ ಜತೆ ಸೇರಿ ತಾಯಿಯೇ ತನ್ನ 2 ಗಂಡು ಮಕ್ಕಳನ್ನು ಕೊಂದು ಶ್ಮಶಾನದಲ್ಲಿ ಹೂತು ಹಾಕಿದ ಘಟನೆ ನಗರದ ಜಾಲಮಂಗಲ ರಸ್ತೆ ಗೀತಾಮಂದಿರ ಬಡಾವಣೆಯಲ್ಲಿ ನಡೆದಿದೆ.
ಕಬಿಲ (2), ಕಬಿಲನ್ (11 ತಿಂಗಳು) ಹತ್ಯೆಯಾದ ಮಕ್ಕಳು.
ತಾಯಿ ಸ್ವೀಟಿ, ಪ್ರಿಯಕರ ಜಾರ್ಜ್ ಫ್ರಾನ್ಸಿಸ್ ಮಕ್ಕಳನ್ನು ಕೊಂದು ಹೂತುಹಾಕಿದ್ದು ಇವರ ವಿರುದ್ಧ ಕ್ರಮಕ್ಕೆ ತಂದೆ ಬೆಂಗಳೂರಿನ ಎ.ಕೆ. ಕಾಲನಿ ನಿವಾಸಿ ಶಿವ ಅವರು ಐಜೂರು ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಟ್ಯಾನರಿ ರಸ್ತೆ ಎ.ಕೆ. ಕಾಲನಿ ನಿವಾಸಿ ಶಿವ 4 ವರ್ಷಗಳ ಹಿಂದೆ ಅದೇ ಬಡಾವಣೆ ಸ್ವೀಟಿಯನ್ನು ವಿವಾಹವಾಗಿದ್ದ. ಈ ದಂಪತಿಗೆ 2 ಗಂಡು ಮಕ್ಕಳು. ಒಂದೂವರೆ ತಿಂಗಳ ಹಿಂದೆ ಮಕ್ಕಳ ಜತೆ ಸ್ವೀಟಿ ಮನೆ ಬಿಟ್ಟು ಹೋಗಿ ಮತ್ತೆ ಹಿಂದಿರುಗಿ ಬಂದಿದ್ದಳು. ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದೇನೆ ಎಂದಿದ್ದಳು. ಮತ್ತೆ ಆ. 19ಕ್ಕೆ ಸ್ವೀಟಿ ಮಕ್ಕಳೊಂದಿಗೆ ಮನೆಯಿಂದ ಕಾಣೆಯಾಗಿದ್ದಳು. ಸ್ವೀಟಿಯ ಬ್ಯಾಗ್‌ನಲ್ಲಿ ಜಾರ್ಜ್ ಫ್ರಾನ್ಸಿಸ್‌ನ ಆಧಾರ್ ಕಾರ್ಡ್ ಸಿಕ್ಕದ ಹಿನ್ನೆಲೆಯಲ್ಲಿ ಆತನನ್ನು ಸಂಪರ್ಕಿಸಿದಾಗ ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಈ ಸಂಬಂಧ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.